ಕರ್ನಾಟಕ

karnataka

By

Published : Dec 13, 2021, 5:09 PM IST

ETV Bharat / bharat

'ಕಾಶಿ ವಿಶ್ವನಾಥ ಧಾಮ' ದೇಶದ ಸಂಸ್ಕೃತಿ, ಪ್ರಾಚೀನ ಇತಿಹಾಸಕ್ಕೆ ಸಾಕ್ಷಿ - ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತು

ಉತ್ತರ ಪ್ರದೇಶದ ವಾರಾಣಸಿಯಲ್ಲಿ 'ಕಾಶಿ ವಿಶ್ವನಾಥ ಧಾಮ' ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕಾರಿಡಾರ್​ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರನ್ನು ವಿಶೇಷವಾಗಿ ಅಭಿನಂದಿಸಿದರು.

PM Modi
ಪ್ರಧಾನಿ ಮೋದಿ

ವಾರಣಾಸಿ (ಉತ್ತರ ಪ್ರದೇಶ): ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 'ಕಾಶಿ ವಿಶ್ವನಾಥ ಧಾಮ' ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಇದು ಗಂಗಾ ನದಿ ಹಾಗೂ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್​ ಆಗಿದೆ.

ಹರ್ ಹರ್ ಮಹಾದೇವ್ ಘೋಷಣೆ ಕೂಗಿದ ಮೋದಿ

ಉದ್ಘಾಟನೆ ಬಳಿಕ 'ಹರ್ ಹರ್ ಮಹಾದೇವ್' ಘೋಷಣೆಯೊಂದಿಗೆ ತಮ್ಮ ಭಾಷಣ ಪ್ರಾರಂಭಿಸಿದ ಮೋದಿ, ಕಾಶಿ ವಿಶ್ವನಾಥ ಧಾಮವು ಭಾರತದ ಸಂಸ್ಕೃತಿ, ಪ್ರಾಚೀನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ನಮ್ಮ ಪುರಾತನ ಮೌಲ್ಯಗಳು ನಮ್ಮ ಭವಿಷ್ಯದ ಕಡೆಗೆ ಹೇಗೆ ಮಾರ್ಗದರ್ಶನ ನೀಡುತ್ತಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದು ನಮ್ಮ ಭಾರತದ ಸನಾತನ ಸಂಸ್ಕೃತಿಯ ಪ್ರತೀಕ. ನವ ಭಾರತದಲ್ಲಿ 'ಪರಂಪರೆ' ಮತ್ತು 'ವಿಕಾಸ' ಇದೆ ಎಂದರು.

ಕಾಶಿ ವಿಶ್ವನಾಥ ಧಾಮ ಯೋಜನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ನೀವು ಇಲ್ಲಿಗೆ ಬಂದಾಗ, ನೀವು ಕೇವಲ ನಂಬಿಕೆ ನೋಡುವುದಿಲ್ಲ. ನಿಮ್ಮ ಗತಕಾಲದ ವೈಭವವನ್ನು ನೀವು ಇಲ್ಲಿ ಅನುಭವಿಸುವಿರಿ. ಪ್ರಾಚೀನ ಮತ್ತು ಆಧುನಿಕ ಹೇಗೆ ಒಟ್ಟಿಗೆ ಜೀವಂತವಾಗಿವೆ ಎಂಬುದನ್ನು ನೀವು ನೋಡುತ್ತೀರಿ. ಸ್ವಚ್ಛತೆ, ಸೃಜನತೆ ಹಾಗೂ ಆತ್ಮನಿರ್ಭರ ಭಾರತ ರಚಿಸಲು ನಿರಂತರ ಪ್ರಯತ್ನಗಳು - ಈ ಮೂರು ನಿರ್ಣಯಗಳನ್ನು ನಾನು ನಿಮ್ಮಿಂದ ಬಯಸುತ್ತೇನೆ, ನಿಮಗಾಗಿ ಅಲ್ಲ, ಆದರೆ, ನಮ್ಮ ದೇಶಕ್ಕಾಗಿ ಎಂದಿ ಮೋದಿ ಹೇಳಿದರು.

ವಾರಾಣಸಿಯಲ್ಲಿ ಪಿಎಂ ಮೋದಿ ಭಾಷಣ

ಇದನ್ನೂ ಓದಿ: PM Modi visits Varanasi: ಗಂಗೆಯಲ್ಲಿ ಮಿಂದೆದ್ದ ಮೋದಿ.. ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದ ಪ್ರಧಾನಿ

ಬಾಬಾ ವಿಶ್ವನಾಥ್ ಎಲ್ಲರಿಗೂ ಸೇರಿದವರು, ಗಂಗಾ ಮಾತೆ ಎಲ್ಲರಿಗೂ ಸೇರಿದವಳು. ಕಾಶಿ ವಿಶ್ವನಾಥ ಧಾಮ ಪೂರ್ಣಗೊಳ್ಳುವುದರಿಂದ ದಿವ್ಯಾಂಗರು ಸೇರಿದಂತೆ ಎಲ್ಲರೂ ಸುಲಭವಾಗಿ ದೇವಸ್ಥಾನಕ್ಕೆ ಬರಬಹುದಾಗಿದೆ. ಈ ಹಿಂದೆ ಕೇವಲ 2-3 ಸಾವಿರ ಚದರ ಅಡಿಯಷ್ಟಿದ್ದ ಇಲ್ಲಿನ ದೇವಾಲಯದ ವಿಸ್ತೀರ್ಣ ಈಗ ಸುಮಾರು 5 ಲಕ್ಷ ಚದರ ಅಡಿಯಷ್ಟಾಗಿದೆ. ಈಗ 50 ರಿಂದ 75 ಸಾವಿರ ಭಕ್ತರು ದೇವಾಲಯಕ್ಕೆ ಬರಬಹುದು ಎಂದು ಪ್ರಧಾನಿ ಮಾಹಿತಿ ನೀಡಿದರು.

ಕಾಶಿ ವಿಶ್ವನಾಥ ಧಾಮ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರೊಂದಿಗೆ ಮೋದಿ

ಕಾರ್ಮಿಕರೊಂದಿಗೆ ಭೋಜನ

ಯೋಜನೆಯನ್ನು ಉದ್ಘಾಟಿಸುವ ಮೊದಲು ಕಾರಿಡಾರ್​ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಮೇಲೆ ಹೂವಿನ ಮಳೆ ಹರಿಸಿ ಪ್ರಧಾನಿ ಅವರನ್ನು ಅಭಿನಂದಿಸಿದರು. ಕಾಶಿ ವಿಶ್ವನಾಥ ಧಾಮವನ್ನು ನವೀಕರಿಸಲು ಶ್ರಮಿಸಿದ ನಮ್ಮ ಎಲ್ಲಾ ಶ್ರಮಿಕರಿಗೆ ನಾನು ತಲೆಬಾಗುತ್ತೇನೆ. ಕೋವಿಡ್-19 ಸಾಂಕ್ರಾಮಿಕ ಒಡ್ಡಿದ ಅನೇಕ ಸವಾಲುಗಳ ನಡುವೆಯೂ ಅವರು ಯಶಸ್ಸನ್ನು ಸಾಧಿಸಿದ್ದಾರೆ.

ಈ ಭವ್ಯ ಸಂಕೀರ್ಣದ ನಿರ್ಮಾಣದಲ್ಲಿ ಬೆವರು ಸುರಿಸಿದ ಪ್ರತಿಯೊಬ್ಬ ಕಾರ್ಮಿಕ ಸಹೋದರ ಮತ್ತು ಸಹೋದರಿಯರಿಗೂ ನಾನು ನನ್ನ ಕೃತಜ್ಞತೆ ತಿಳಿಸುತ್ತೇನೆ ಎಂದ ಮೋದಿ ಕಾರ್ಯಕ್ರಮದ ಮುಗಿದ ಬಳಿಕ ಅದೇ ಕಾರ್ಮಿಕರೊಂದಿಗೆ ಕುಳಿತು ಭೋಜನ ಸವಿದರು.

ಲಲಿತಾ ಘಾಟ್‌ನಿಂದ ರವಿದಾಸ್ ಘಾಟ್‌ಗೆ ಬೋಟ್​ನಲ್ಲಿ ತೆರಳಿದ ಮೋದಿ

ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಜೊತೆಗೆ ಲಲಿತಾ ಘಾಟ್‌ನಿಂದ ರವಿದಾಸ್ ಘಾಟ್‌ಗೆ ಬೋಟ್​ನಲ್ಲಿ ತೆರಳಿದರು.

ABOUT THE AUTHOR

...view details