ಮುಂಬೈ (ಮಹಾರಾಷ್ಟ್ರ):ಬಹುದಿನಗಳ ನಂತರ ಬಾಲಿವುಡ್ನಲ್ಲಿ ತೆರೆಕಂಡಿರುವ ನಟ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಹಾರರ್ - ಕಾಮಿಡಿ ಮಾದರಿಯ ಚಿತ್ರ 'ಭೂಲ್ ಭೂಲೈಯಾ 2' ಇದೀಗ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಬಾಕ್ಸ್ ಆಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.
ಶುಕ್ರವಾರ ತೆರೆಕಂಡಿದ್ದ 'ಭೂಲ್ ಭೂಲೈಯಾ-2' ಮೊದಲ ದಿನ 14.11 ಕೋಟಿ ರೂ.ಗಳ ಆದಾಯ ಗಳಿಸಿತ್ತು. 2ನೇ ದಿನ ಶನಿವಾರದಂದು 18.34 ಕೋಟಿ ರೂ. ಹಾಗೂ ಭಾನುವಾರದಂದು 23.51 ಕೋಟಿ ರೂ. ಬಾಚಿಕೊಂಡಿದೆ. ಇದರಿಂದ ಒಟ್ಟಾರೆ ಆರಂಭಿಕ ವಾರಾಂತ್ಯದಲ್ಲಿ 55.96 ಕೋಟಿ ರೂ. ಗಳಿಸಿದೆ.
ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ನಂತರ ಈ ವರೆಗೆ ಬಾಲಿವುಡ್ನಲ್ಲಿ ತೆರೆಗೆ ಬಂದಿದ್ದ ಯಾವ ಸಿನಿಮಾಗಳೂ ಬಾಕ್ಸ್ ಆಫೀಸ್ನಲ್ಲಿ ಅಷ್ಟೊಂದು ಗಳಿಕೆ ಮಾಡಿರಲಿಲ್ಲ. ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಮತ್ತು ಮಾರ್ಚ್‌ನಲ್ಲಿ ತೆರೆಕಂಡ ಕಾಶ್ಮೀರ ಫೈಲ್ಸ್ ಮೊದಲ ದಿನಗಳಲ್ಲಿ ಕಡಿಮೆ ಗಳಿಕೆ ಮಾಡಿದ್ದರೂ ನಂತರದ ದಿನಗಳಲ್ಲಿ ಅದ್ಭುತ ಗಳಿಕೆ ಮಾಡಿದ್ದವು.
ಇದೀಗ 2022 ರಲ್ಲಿ ಬಿಡುಗಡೆಯಾದ ಯಾವ ಸಿನಿಮಾಗಳಿಗೂ ಸಿಗದ ಜನಪ್ರಿಯತೆ 'ಭೂಲ್ ಭೂಲೈಯಾ -2' ಸಿನೆಮಾಕ್ಕೆ ಲಭಿಸಿದೆ. ಭೂಷಣ್ ಕುಮಾರ್ ಮತ್ತು ಮುರಾದ್ ಖೇತಾನಿ ನಿರ್ಮಿಸಿರುವ ಭೂಲ್ ಭುಲೈಯಾ 2 ಅನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ ಮತ್ತು ಟಬು ಕೂಡ ನಟಿಸಿದ್ದಾರೆ.
ಓದಿ:ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿರುವ ಕನ್ನಡದ 'ಕಿಸ್'ತಾರೆ : ರಶ್ಮಿಕಾ ಹಾದಿಯಲ್ಲಿ ಶ್ರೀಲೀಲಾ 'ಭರಾಟೆ'