ಸೋನಿಪತ್ (ಹರಿಯಾಣ) : ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹಾಗೂ ಮಹಾರಾಷ್ಟ್ರದ ಅಮರಾವತಿಯಲ್ಲಿ ಉಮೇಶ್ ಹತ್ಯೆಯ ನಂತರ ಪ್ರಚೋದನಕಾರಿ ಮಾತುಗಳ ಪರ್ವ ಆರಂಭವಾಗಿದೆ. ಈ ನಡುವೆ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸೂರಜ್ ಪಾಲ್ ಅಮ್ಮು ಈ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹರಿಯಾಣದ ಸೋನಿಪತ್ ಜಿಲ್ಲೆಯ ದಹಿಸ್ರಾ ಗ್ರಾಮದಲ್ಲಿ ಪೃಥ್ವಿರಾಜ್ ಚೌಹಾಣ್ ಅವರ ಜನ್ಮದಿನದಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಸೂರಜ್ ಪಾಲ್ ಅಮ್ಮು ಕೂಡ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸೂರಜ್ ಪಾಲ್ ಅಮ್ಮು, ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಬೆಂಬಲಿಸಿದರು ಮತ್ತು ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ನೂಪುರ್ ಶರ್ಮಾ ಹೇಳಿಕೆಯ ನಂತರ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಮತ್ತು ಅಮರಾವತಿಯಲ್ಲಿ ಉಮೇಶ್ ಕೊಹ್ಲೆ ಅವರ ಕುತ್ತಿಗೆಯನ್ನು ಕತ್ತರಿಸಲಾಯಿತು. ಈ ಎರಡೂ ಪ್ರಕರಣಗಳನ್ನು ಉಲ್ಲೇಖಿಸಿ ಅಮ್ಮು ವೇದಿಕೆಯಲ್ಲೇ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ನೂಪುರ್ ಶರ್ಮಾ ಅವರನ್ನು ಕ್ಷಮೆ ಕೇಳುವಂತೆ ಹೇಳಲಾಗಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಬಗ್ಗೆ ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ. ನಮ್ಮನ್ನು ಬೆದರಿಸಿದರೂ ನಾವು ಹೆದರುವುದಿಲ್ಲ ಎಂದು ಇದೇ ವೇಳೆ ಅಮ್ಮು ಹೇಳಿದರು.