ಸಾಂಗ್ಲಿ (ಮಹಾರಾಷ್ಟ್ರ): 2015ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಬಸ್ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಜಪ್ತಿ ಮಾಡಿ, ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಬಸ್ ಹಸ್ತಾಂತರ ಮಾಡಲಾಗಿತ್ತು. ಆದ್ರೆ ಸಂತ್ರಸ್ತರಿಗೆ ಇಂದು ಕೆಎಸ್‌ಆರ್ಟಿಸಿ ಪರಿಹಾರ ನೀಡಿ ಮರಳಿ ಬಸ್ ಪಡೆದುಕೊಂಡಿದೆ.
ಪ್ರಕರಣದ ವಿವರ: 2015ರಲ್ಲಿ ಮೀರಜ್ನಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು ಭಾನುದಾಸ್ ಬೋಸಲೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ತಮಗೆ ಪರಿಹಾರ ನೀಡುವಂತೆ ಬೋಸಲೆ ಕುಟುಂಬ ಸಾಂಗ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, 2016ರಲ್ಲಿ ಮೃತನ ಕುಟುಂಬಕ್ಕೆ ಕರ್ನಾಟಕ ಸಾರಿಗೆ ಸಂಸ್ಥೆ 8 ಲಕ್ಷ, 33 ಸಾವಿರದ 563 ರೂಪಾಯಿ ನೀಡುವಂತೆ ಆದೇಶಿಸಿತ್ತು.
ಇದನ್ನೂ ಓದಿ:ಏಕಾಏಕಿ ಕೊರಳಿಗೆ ಹಾರ ಹಾಕಿದ್ದಕ್ಕೆ ಸಿಟ್ಟು; ವರನಿಗೆ ಕಪಾಳಮೋಕ್ಷ ಮಾಡಿದ ವಧು!
ಆದರೆ, ಪರಿಹಾರ ನೀಡುವ ವಿಷಯದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ಕಾಲಹರಣ ಮಾಡಿದೆ. ಇದೀಗ, ಭಾನುದಾಸ್ ಬೋಸಲೆ ಪತ್ನಿ ವಿಜಯಾ ಸಾಂಗ್ಲಿ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ಮತ್ತೊಮ್ಮೆ ತಂದಿದ್ದಾರೆ. ಕೋರ್ಟ್ ಆದೇಶದನ್ವಯ ಸಾಂಗ್ಲಿ ಬಸ್ ಡಿಪೋದಿಂದ ಕರ್ನಾಟಕ ಸಾರಿಗೆ ಬಸ್‌ವೊಂದನ್ನು ಜಪ್ತಿ ಮಾಡಿರುವ ಅಧಿಕಾರಿಗಳು ಮೃತ ಸಂತ್ರಸ್ತರ ಕುಟುಂಬಕ್ಕೆ ಒಪ್ಪಿಸಿದ್ದರು.
ಕೆಎಸ್‌ಆರ್ಟಿಸಿ ಪ್ರತಿಕ್ರಿಯೆ: ಘಟನೆ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವೈ. ನಾಯಕ, ಮಹಾರಾಷ್ಟ್ರದಲ್ಲಿ ನಡೆದಿದ್ದ ಬಸ್ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದ. ಕುಟುಂಬಸ್ಥರು ಪರಿಹಾರ ಕೋರಿ ಸಾಂಗ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನಲ್ಲಿ ನಮ್ಮ ವಿರುದ್ಧ ತೀರ್ಪು ಬರುವ ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಆದೇಶ ಬಂದಿತ್ತು.
ಕೊರೊನಾ ಕಾರಣಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಷ್ಟದಲ್ಲಿದ್ದು, ಪರಿಹಾರ ಹಣ ನೀಡಲು ವಿಳಂಬವಾಗಿತ್ತು. ಹೀಗಾಗಿ ಬಸ್ ಸೀಜ್ ಮಾಡುವಂತೆ ಕೋರ್ಟ್ ಆದೇಶಿಸಿತ್ತು. ಮೂರು ದಿನಗಳ ಹಿಂದೆಯೇ ಪರಿಹಾರದ ಚೆಕ್ ನೀಡಿದ್ದೇವೆ. ಆದರೆ ಸಂತ್ರಸ್ತ ಕುಟುಂಬಸ್ಥರು ಆರ್‌ಟಿಜಿಎಸ್ ಮಾಡುವಂತೆ ಪಟ್ಟು ಹಿಡಿದಿದ್ದರು. ಆದ್ದರಿಂದ ಇಂದು ಬೆಳಗ್ಗೆಯೇ ಆರ್‌ಟಿಜಿಎಸ್ ಮಾಡಿ ಬಸ್ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.