ಮತ್ತೆ ಬೆಳಗಾವಿಗೆ ಬರುವುದಾಗಿ ಹೇಳಿಕೆ ಕೊಟ್ಟ ಮಹಾ ಸಚಿವ ಕೊಲ್ಲಾಪುರ(ಮಹಾರಾಷ್ಟ್ರ): ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಮತ್ತೆ ಉದ್ಧಟತನ ಮೆರೆದಿದ್ದಾರೆ. ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿರುವ ಘಟನೆ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕೊಲ್ಲಾಪುರ ಜಿಲ್ಲೆಯ ಶಿನೋಳಿ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ಅವರು ಎಂಇಎಸ್ ಕಿಡಗೇಡಿಗಳನ್ನು ಭೇಟಿಯಾಗಿದ್ದು, ಈ ವೇಳೆ ಶಿನೋಳಿ ಗ್ರಾಮದಲ್ಲಿ 'ಮರಾಠಿಗರಿಗೆ ಅನ್ಯಾಯ ಮಾಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ' ಎಂದು ಘೋಷಣೆ ಕೂಗಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರ ನಿಮಿತ್ತ ಶಿನೋಳಿಗೆ ಸಚಿವರು ಆಗಮಿಸಿದ್ದರು. ಅಲ್ಲದೆ, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು. ಬೆಳಗಾವಿ ನಮ್ಮ ಹಕ್ಕು, ಕರ್ನಾಟಕದಲ್ಲಿ ಇರಲ್ಲ ಎಂದು ಘೋಷಣೆ ಕೂಗಿದ್ದಾರೆ ಎಂದು ತಿಳಿದುಬಂದಿದೆ.
10 ಕ್ಕೂ ಅಧಿಕ ಎಂಇಎಸ್ ಮುಖಂಡರು ಬೆಳಗಾವಿಯಿಂದ ಶಿನೋಳಿಗೆ ತೆರಳಿದ್ದರು. ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಿದೆ. ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲಾತಿ ಪತ್ರ ನೀಡುತ್ತಿಲ್ಲ ಎಂದು ಸಚಿವ ಶಂಭುರಾಜ ದೇಸಾಯಿ ಬಳಿ ಕೆಲ ಮರಾಠಿಗರು ಸುಳ್ಳು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎಂಇಎಸ್ ಕಿಡಿಗೇಡಿಗಳ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಶಂಭುರಾಜ ದೇಸಾಯಿ, ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಪರವಾಗಿದೆ. ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಿ ಇಬ್ಬರನ್ನು ಸಚಿವರನ್ನಾಗಿ ನೇಮಿಸಿದೆ. ಅದರಲ್ಲಿ ನಾನು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವನಾಗಿ ನೇಮಕ ಆಗಿದ್ದೇನೆ. ತಕ್ಷಣವೇ ನಾವು ಬೆಳಗಾವಿಗೆ ಬರಲು ನಿರ್ಧಾರ ಮಾಡಿದ್ದೆವು. ಡಿಸೆಂಬರ್ 3ಕ್ಕೆ ಬರಬೇಕಿತ್ತು.. ಆದರೆ 6 ರಂದು ಬರುವುದು ನಿಗದಿ ಆಯ್ತು. 850 ಹಳ್ಳಿಗಳಿಗೆ ಏನು ಸೌಲಭ್ಯ ಕೊಡಬೇಕು.. ಏನು ಅನ್ಯಾಯ ಆಗಿದೆ ಅನ್ನೋದನ್ನು ತಿಳಿಯಬೇಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆದು ಒಳ್ಳೆಯದಾಗಿದೆ ಎಂದರು.
ಈಗ ಕರ್ನಾಟಕ ಮುಖ್ಯಮಂತ್ರಿ ಅವರೇ ನಾವು ಬರುವುದಕ್ಕೆ ನಿರ್ಬಂಧ ಇಲ್ಲ ಅಂತ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಬನ್ನಿ ಸಭೆ, ಸಮಾಲೋಚನೆ ನಡೆಸಿ ಎಂದಿದ್ದಾರೆ. ಈಗ ಎರಡು ರಾಜ್ಯದ ಮಧ್ಯೆ ಉದ್ವಿಗ್ನ ವಾತಾವರಣ ನಿರ್ಮಾಣ ಆಗದಂತೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳೋಣ. ಈಗ ನಾಗಪುರದಲ್ಲಿ ಅಧಿವೇಶನ ನಡೆಯುತ್ತಿದೆ. ನಾಗಪುರ ಅಧಿವೇಶನ ಮಹತ್ವದ್ದಾಗಿದೆ. ಅಧಿವೇಶನ ಬಳಿಕ ಎಂಇಎಸ್ ಪ್ರಮುಖರ ಜೊತೆಗೆ ಚರ್ಚೆ ಮಾಡುತ್ತೇವೆ. ಮರಾಠಿ ಭಾಷೆಯಲ್ಲಿ ದಾಖಲೆ ನೀಡುವುದು ಸೇರಿ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಮಹಾರಾಷ್ಟ್ರದ ಸಚಿವ ಶಂಭುರಾಜ್ ದೇಸಾಯಿ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಬೆಳಗಾವಿ ಗಡಿಭಾಗದ ಮರಾಠಿಗರಿಗಾಗಿ ಮಹಾರಾಷ್ಟ್ರ ಸರ್ಕಾರ ಸಹಾಯವಾಣಿ, ವೆಬ್‌ಸೈಟ್ ತೆರೆಯಲಿ ಎಂದು ಎಂಇಎಸ್ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಎಂಇಎಸ್ ಕಿಡಿಗೇಡಿಗಳ ಮನವಿ ಸ್ವೀಕರಿಸಿದ ಸಚಿವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ಓದಿ:ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಬೆಳಗಾವಿಗೆ ಗೌಪ್ಯ ಭೇಟಿ