ನವದೆಹಲಿ:ಮುಂದಿನ ಆದೇಶದವರೆಗೆ ವಿದ್ಯಾರ್ಥಿಗಳು ಯಾವುದೇ ರೀತಿಯ ಧಾರ್ಮಿಕ ಸಂಕೇತಗಳನ್ನು ಸೂಚಿಸುವ ದಿರಿಸುಗಳನ್ನು ಧರಿಸದೆ ಶಾಲೆ- ಕಾಲೇಜುಗಳಿಗೆ ಹಾಜರಾಗಬೇಕು ಎಂದು ಹೈಕೋರ್ಟ್ ನಿನ್ನೆ ನೀಡಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಹಿಜಾಬ್ ವಿವಾದ ಸಂಬಂಧ ರಾಜ್ಯ ಹೈಕೋರ್ಟ್ನಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಪೂರ್ಣ ವಿಚಾರಣೆ ಬಾಕಿಯಿರುವಾಗಲೇ ಕೆಲವು ವಿದ್ಯಾರ್ಥಿಗಳು ಮಧ್ಯಂತರ ಆದೇಶ ಪ್ರಶ್ನಿಸಿ ತುರ್ತು ವಿಚಾರಣೆಗಾಗಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?
ಫೆಬ್ರವರಿ 10ರಂದು ಹಿಜಬ್-ಕೇಸರಿ ವಿವಾದದಿಂದಾಗಿ ಮುಚ್ಚಲಾಗಿದ್ದ ಶಾಲಾ-ಕಾಲೇಜುಗಳನ್ನು ತಕ್ಷಣಕ್ಕೆ ಜಾರಿಯಾಗುವಂತೆ ಆರಂಭಿಸಬೇಕು. ಅಂತಿಮ ಆದೇಶ ಬರುವವರೆಗೂ ವಿದ್ಯಾರ್ಥಿಗಳು ಹಿಜಾಬ್-ಕೇಸರಿ ಶಾಲನ್ನು ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಈ ಪ್ರಕರಣದ ಕುರಿತು ಶೀಘ್ರವೇ ತೀರ್ಪು ನೀಡಲಾಗುವುದು. ಅಲ್ಲಿಯವರೆಗೂ ರಾಜ್ಯದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದರು.
ಇದನ್ನೂ ಓದಿ:ಅಂತಿಮ ಆದೇಶ ಬರುವವರೆಗೂ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಬ್ - ಕೇಸರಿ ಶಾಲು ಧರಿಸುವಂತಿಲ್ಲ - ಹೈಕೋರ್ಟ್
ಪ್ರಕರಣದ ಮುಂದಿನ ವಿಚಾರಣೆ ಸೋಮವಾರ ಮಧ್ಯಾಹ್ನ 2:30ಕ್ಕೆ ನಡೆಯಲಿದೆ.