ಬೆಂಗಳೂರು: ವಿವಾದಿತ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶ ಪೊಲೀಸರು ಜಾರಿ ಮಾಡಿದ್ದ ನೋಟಿಸ್ ಅನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಗಾಜಿಯಾಬಾದ್ನ ಲೋನಿ ಬಾರ್ಡರ್ ಠಾಣೆ ಪೊಲೀಸರು ನೀಡಿರುವ ನೋಟಿಸ್ ರದ್ದು ಕೋರಿ ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಜಿ. ನರೇಂದರ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿರುವ ಪೀಠ, ಪ್ರಕರಣದಲ್ಲಿ ಮೊದಲಿಗೆ ಸಿಆರ್ ಪಿಸಿ ಸೆಕ್ಷನ್ 160 ರಡಿ ನೋಟಿಸ್ ಜಾರಿ ಮಾಡಿದ್ದ ಪೊಲೀಸರು ನಂತರ ಸಿಆರ್ ಪಿಸಿ ಸೆಕ್ಷನ್ 41 ಎ ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಹೀಗೆ ಕಾನೂನನ್ನು ಬೇಕಾದಂತೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಪೊಲೀಸರ ನೋಟಿಸ್ ರದ್ದು ಮಾಡಿ ಆದೇಶಿಸಿದೆ.
ಇದೇ ವೇಳೆ ಟ್ವಿಟರ್ ಇಂಡಿಯಾ ಸಂಸ್ಥೆಯು ಐರ್ಲೆಂಡ್‌ನಲ್ಲಿರುವ ಟ್ವಿಟರ್ ಇಂಟರ್ ನ್ಯಾಷನಲ್ ಕಂಪೆನಿಯಿಂದ ನಿಯಂತ್ರಿಸಲ್ಪಡುತ್ತಿದೆ. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್ ಗಳನ್ನು ನಿಯಂತ್ರಿಸುವುದು ಕಷ್ಟ ಎಂಬುದನ್ನೂ ನ್ಯಾಯಾಲಯ ಪರಿಗಣಿಸುತ್ತದೆ. ಹೀಗಾಗಿ ಪೊಲೀಸರು ಸೆಕ್ಷನ್ 41 ರಡಿ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ ಎಂದಿರುವ ಪೀಠ, ಸೆಕ್ಷನ್ 160 ರಡಿ ನೀಡಿದ ನೋಟಿಸ್ ನಂತೆ ಪರಿಗಣಿಸಿ ಪ್ರಕರಣದ ತನಿಖೆಗೆ ಸಹಕಾರ ನೀಡುವಂತೆ ಟ್ವಿಟರ್ ಎಂಡಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ :
ಗಾಜಿಯಾಬಾದ್ನಲ್ಲಿ ತಾಯಿತ ಮಾರುವ ಮುಸ್ಲಿಂ ವೃದ್ಧನೋರ್ವನಿಗೆ ಆರು ಜನರ ಗುಂಪು ಥಳಿಸಿ ಆತನ ಗಡ್ಡ ಕತ್ತರಿಸಿ, ಬಲವಂತವಾಗಿ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಎಂದು ಹೇಳಿಸಿದ್ದರೆನ್ನಲಾದ ವಿಡಿಯೋವೊಂದನ್ನು ಟ್ವಿಟ್ಟರ್ನಲ್ಲಿ ಹಾಕಲಾಗಿತ್ತು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಲೋನಿ ಬಾರ್ಡರ್ ಠಾಣೆ ಪೊಲೀಸರು, ಆರೋಪಿಗಳು ಗಲಭೆಗೆ ಪ್ರಚೋದಿಸಿದ್ದಾರೆ. ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ್ದಾರೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿದ್ದಾರೆ. ಕಿಡಿಗೇಡಿತನ ಹಾಗೂ ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಎಂಬ ಆರೋಪಗಳಡಿಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 153, 153 ಎ, 295 ಎ, 505, 120 ಬಿ ಮತ್ತು 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಕೆಲ ಆರೋಪಿಗಳನ್ನು ಬಂಧಿಸಿರುವ ಪೊಲೀಸರು. ಟ್ವಿಟರ್ ಎಂಡಿಗೆ ವಿಚಾರಣೆಗೆ ಹಾಜರಾಗುವಂತೆ ಮೊದಲಿಗೆ ಸೆಕ್ಷನ್ 160ರ ಅಡಿ ನೋಟಿಸ್ ನೀಡಿದ್ದರು. ಈ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಆರ್ ಪಿಸಿ ಸೆಕ್ಷನ್ 41(ಎ) ಅಡಿ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಮನೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.