ಹಿರಿಯೂರು( ಚಿತ್ರದುರ್ಗ):ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ಅವರು, ಹಿರಿಯೂರಿನಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರ ಪ್ರತಿ ವಹಿವಾಟಿನ ಮೇಲೆ ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.
13,000 ಖಾಸಗಿ ಶಾಲೆಗಳೂ ಶೇ 40ರಷ್ಟು ಕಮಿಷನ್ ನೀಡಿವೆ. ಇದು ನನ್ನ ಮಾತಲ್ಲ ಅಲ್ಲಿ ಬಿಜೆಪಿ ಶಾಸಕರೇ ಈ ಮಾತನ್ನು ಹೇಳುತ್ತಿದ್ದಾರೆ. ಹೀಗಾದರೆ ಕರ್ನಾಟಕ ಸರ್ಕಾರ ಎಷ್ಟು ಭ್ರಷ್ಟ ಇರಬೇಕು ನೀವೇ ತೀರ್ಮಾನ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಿಎಂ ಸ್ಥಾನವೂ ಮಾರಾಟಕ್ಕಿದೆ: 2,500 ಕೋಟಿ ರೂ ಇದ್ದರೆ ಸಿಎಂ ಸ್ಥಾನವನ್ನು ಖರೀದಿಸಬಹುದು. ಹೀಗಂತಾ ನಾನು ಹೇಳುತ್ತಿಲ್ಲ, ಕಾಂಗ್ರೆಸ್ ಪಕ್ಷದ ನಾಯಕರು ಹೇಳುತ್ತಿಲ್ಲ. ಆಳುವ ಸರ್ಕಾರದ ಬಿಜೆಪಿ ಶಾಸಕರೇ ಈ ಮಾತನ್ನು ಹೇಳಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.
ಸಿಎಂ ಖುರ್ಚಿಯ ಕಥೆ ಇದಾರೆ, ರಾಜ್ಯ ಸರ್ಕಾರದಲ್ಲಿ ಉದ್ಯೋಗಗಳನ್ನೂ ಮಾರಾಟಕ್ಕೆ ಇಡಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯನ್ನು 80 ಲಕ್ಷ ದಿಂದ ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳೂ ಮಾರಾಟವಾಗಿವೆ. ಇಂಜಿನಿಯರಿಂಗ್ ಹುದ್ದೆಗಳು ಮಾರಾಟವಾಗಿವೆ. ಜನರು ಮಾರಾಟ ಮಾಡಬಹುದಾದ ಎಲ್ಲವನ್ನೂ ಸರ್ಕಾರವೇ ಮಾರಾಟಕ್ಕೆ ಇಟ್ಟಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಭಾರತ ಜೋಡೋ ಯಾತ್ರೆಯ ನೇತಾರ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಈ ಯಾತ್ರೆ ಯಾಕೆ ಮಾಡುತ್ತಿದ್ದೇವೆ:ದ್ವೇಷ ಮತ್ತು ಪ್ರೀತಿಯ ನಡುವಿನ ಈ ಯುದ್ಧ ಹೊಸದಲ್ಲ. ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್ ಅವರು ನಡೆಸಿದ ಹೋರಾಟವೂ ಇದೇ ಮಾದರಿಯದ್ದಾಗಿತ್ತು. ಈ ಮಹಾನ್ ನಾಯಕರ ಧ್ವನಿಯೇ ಇಂದು ಪ್ರತಿಧ್ವನಿಸುತ್ತಿದೆ. ಈ ನಾಯಕರಲ್ಲಿ ಯಾರೂ ಹಿಂಸೆ ಅಥವಾ ದ್ವೇಷವನ್ನು ಬೋಧಿಸಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಯಾತ್ರೆಯ ಉದ್ದೇಶ ಬಿಜೆಪಿ-ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ, ಹಿಂಸಾಚಾರದ ವಿರುದ್ಧ ಜನರನ್ನು ಜಾಗ್ರತಗೊಳಿಸುವ ಹೋರಾಟವಾಗಿದೆ. ಭಾರತ ಇಬ್ಭಾಗವಾಗುವುದಿಲ್ಲ, ಭಾರತ ಒಗ್ಗಟ್ಟಾಗಿ ನಿಲ್ಲುತ್ತದೆ ಎಂಬ ಸಂದೇಶವನ್ನು ಬಿಜೆಪಿಗರಿಗೆ ನೀಡುವುದಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಈ ಯಾತ್ರೆಯಲ್ಲಿ ಆ ಸಂದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ಯಾತ್ರೆಯಲ್ಲಿ ಯಾವುದೇ ಹಿಂಸೆ, ದ್ವೇಷ ಇಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು.
ಇದನ್ನು ಓದಿ:ಬಿಜೆಪಿ ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ನಿಂದ ನಿಜವಾದ ಹೋರಾಟ: ಮಲ್ಲಿಕಾರ್ಜುನ ಖರ್ಗೆ