ಹೈದರಾಬಾದ್: ಇದೇ ತಿಂಗಳು 25ರಂದು ಹಾಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರ ಅಧಿಕಾರವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಹುದ್ದೆಗೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರ ಹೆಸರು ಕೇಳಿಬಂದಿದೆ. ಸದ್ಯಕ್ಕೆ ನಿರ್ದೇಶಕರ ಹುದ್ದೆಗೆ ಕರ್ನಾಟಕ, ದೆಹಲಿ ಸೇರಿದಂತೆ ಮೂರು ರಾಜ್ಯಗಳ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆ ಎಂದು ತಿಳಿದುಬಂದಿದೆ.
ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅವಧಿಯು ಮೇ 25 ರಂದು ಕೊನೆಗೊಳ್ಳಲಿದೆ. ಹೀಗಾಗಿ, ಶನಿವಾರ ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಸಿಬಿಐ ನಿರ್ದೇಶಕರ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್, ಮಧ್ಯಪ್ರದೇಶ ಡಿಜಿಪಿ ಸುಧೀರ್ ಸಕ್ಸೇನಾ ಮತ್ತು ತಾಜ್ ಹಾಸನ್ ಸಿಬಿಐನ ಮುಂದಿನ ನಿರ್ದೇಶಕರಾಗುವ ಲೆಕ್ಕಾಚಾರದಲ್ಲಿದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಕೇಡರ್‌ನ 1986 - ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಕಳೆದ ಮಾರ್ಚ್‌ನಲ್ಲಿ ಗಂಭೀರ ಆರೋಪ ಮಾಡಿದ್ದರು. ಪ್ರವೀಣ್ ಸೂದ್ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿದ್ದಾರೆ, ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ದೂರಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಬಂಧಿಸುವಂತೆ ಆಗ್ರಹಿಸಿದ್ದರು.