ಕರ್ನಾಟಕ

karnataka

ETV Bharat / bharat

ಲಗ್ನ ಪತ್ರಿಕೆಯಲ್ಲಿ ಎಂಎಸ್ ಧೋನಿ ಫೋಟೋ ಹಾಕಿಸಿದ ಕರ್ನಾಟಕದ ಅಭಿಮಾನಿ: ಫೋಟೋ ವೈರಲ್

ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಫೋಟೋ ಹಾಕಿಸಿದ್ದು, ಆ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

fan printed ms dhoni photo on his wedding card
ಲಗ್ನ ಪತ್ರಿಕೆಯಲ್ಲಿ ಎಂಎಸ್ ಧೋನಿ ಫೋಟೋ ಹಾಕಿಸಿದ ಕರ್ನಾಟಕ ಅಭಿಮಾನಿ

By

Published : Mar 11, 2023, 3:46 PM IST

ನವದೆಹಲಿ: 'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತಿ ಗಳಿಸಿದವರು ಮಹೇಂದ್ರ ಸಿಂಗ್ ಧೋನಿ. ಭಾರತಕ್ಕೆ ಟಿ-20 ಮತ್ತು ಏಕದಿನ ವಿಶ್ವಕಪ್ ತಂದುಕೊಟ್ಟ ಇವರಿಗೆ ದೇಶವಷ್ಟೇ ಅಲ್ಲದೇ, ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ತಮ್ಮ ಅಭಿಮಾನಿಗಳ ಕಾರಣದಿಂದ ಮಹಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಇಂತದ್ದೇ ಅಭಿಮಾನಿಯೊಬ್ಬ ತಮ್ಮ ಅಭಿಮಾನವನ್ನು ಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಅಭಿಮಾನಿ ಕರ್ನಾಟಕದವರು ಎನ್ನುವುದು ವಿಶೇಷ.

ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಫೋಟೋ ಹಾಕಿಸಿದ್ದಾರೆ. ಆ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದೆ. ಟ್ವಿಟರ್‌ ಬಳಕೆದಾರರೊಬ್ಬರು ಈ ಲಗ್ನ ಪತ್ರಿಕೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಲಗ್ನ ಪತ್ರಿಕೆಯಲ್ಲಿ ಅಭಿಮಾನಿಯೊಬ್ಬರು ಎಂ.ಎಸ್ ಧೋನಿ ಅವರ ಫೋಟೋವನ್ನು ಪ್ರಿಂಟ್ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಫೋಟೋ ಪ್ರಕಾರ, ಮಾ.12ರಂದು(ಭಾನುವಾರ) ವಿವಾಹ ಕಾರ್ಯಕ್ರಮ ನಡೆಯಲಿದೆ. ಧೋನಿ ಅವರ ಈ ಅಭಿಮಾನಿಯ ಹೆಸರು ಶಮಂತ್ ಕುಮಾರ್ ಪಿ.ಜಿ (ಸಿದ್ಧಾರ್ಥ್) ಎಂದಿದ್ದರೆ, ವಧುವಿನ ಹೆಸರು ಭವ್ಯಶ್ರೀ (ರಮ್ಯ) ಎಂದಿದೆ. ಮದುವೆ ಕಾರ್ಡ್‌ನಲ್ಲಿ ಒಂದೆಡೆ ಗಣೇಶನ ಫೋಟೋ ಮುದ್ರಿಸಿದ್ದರೆ, ಮತ್ತೊಂದೆಡೆ ಧೋನಿ ಫೋಟೋವನ್ನು ಸಹ ಮುದ್ರಿಸಿಲಾಗಿದೆ. ಕಾರ್ಡ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಚಿತ್ರವು ಚಾಂಪಿಯನ್ಸ್ ಟ್ರೋಫಿ 2013ರ ಚಿತ್ರವಾಗಿದೆ. ಇದರ ಹೊರತಾಗಿ ಪತ್ರಿಕೆಯಲ್ಲಿ ಬೇರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬರು ತಮ್ಮ ಮನೆಗೆ ಪೂರ್ತಿ ಅರಿಶಿಣದ ಬಣ್ಣ ಬಳಿದು, "ಹೋಮ್ ಆಫ್ ಧೋನಿ ಫ್ಯಾನ್" ಎಂದು ಹೆಸರಿಟ್ಟಿದ್ದರು. ತಮಿಳುನಾಡಿನ ಅರಂಗೂರ್‌ನಲ್ಲಿರುವ ಗೋಪಿ ಕೃಷ್ಣನ್ ಮತ್ತು ಅವರ ಕುಟುಂಬ ಈ ರೀತಿಯ ಅಭಿಮಾನ ತೋರಿಸಿ ಸುದ್ದಿಯಾಗಿದ್ದರು. ಮಹೇಂದ್ರ ಸಿಂಗ್​ ಧೋನಿ ಸದ್ಯ ತಮ್ಮ ಕೊನೆಯ ಐಪಿಎಲ್ ಆವೃತ್ತಿಯನ್ನು ಆಡಲು ಸಜ್ಜಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಗೌರವ. ತಮಿಳುನಾಡಿನ ಹಲವಾರು ಅಭಿಮಾನಿಗಳು ಈಗಾಗಲೇ ಧೋನಿ ಫೋಟೋವನ್ನು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಇಂದಿಗೂ ಜನರ ನೆಚ್ಚಿನ ನಾಯಕ. ಚೆನ್ನೈ ಸೂಪರ್ ಕಿಂಗ್ಸ್ ನಾಯಕನಿಗೆ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿಗಳಿದ್ದಾರೆ. ಕರ್ನಾಟಕದಲ್ಲಿ ನೆಲೆಸಿರುವ ಅಭಿಮಾನಿಯೊಬ್ಬರು ಧೋನಿ ಮೇಲಿನ ತಮ್ಮ ಕ್ರೇಜ್ ಅನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಮಹಿ ಭಾರತಕ್ಕೆ ಮೂರು ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ತಂದು ಕೊಟ್ಟಿದ್ದಾರೆ. ಈ ಸಾಧನೆ ಮಾಡಿದ ದೇಶದ ಏಕೈಕ ನಾಯಕ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಅವರು ಭಾರತ ಪರ 90 ಟೆಸ್ಟ್ ಪಂದ್ಯಗಳನ್ನಾಡಿದ್ದು, 4,876 ರನ್ ಗಳಿಸಿದ್ದಾರೆ. ಧೋನಿ ಅವರ ಹೆಸರಿನಲ್ಲಿ ಆರು ಶತಕ ಮತ್ತು 33 ಅರ್ಧ ಶತಕಗಳಿವೆ. ಟೆಸ್ಟ್‌ನಲ್ಲಿ ಧೋನಿ ಅವರ ಗರಿಷ್ಠ ಸ್ಕೋರ್ 224 ರನ್. ಮಹಿ 350 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 297 ಇನ್ನಿಂಗ್ಸ್‌ಗಳಲ್ಲಿ 10,773 ರನ್ ಗಳಿಸಿದ್ದಾರೆ. ಏಕದಿನದಲ್ಲಿ 10 ಶತಕ ಮತ್ತು 73 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಏಕದಿನದಲ್ಲಿ ಮಹಿ ಅವರ ಗರಿಷ್ಠ ಸ್ಕೋರ್ 183. ಅವರು 98 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟಿ20ಯಲ್ಲಿ 1617 ರನ್ ಗಳಿಸಿದ್ದಾರೆ.

ಐಪಿಎಲ್ ಸೀಸನ್ 16 ಮಾ.31 ರಿಂದ ಪ್ರಾರಂಭವಾಗಲಿದೆ. ಇಲ್ಲಿ 10 ತಂಡಗಳು ಭಾಗವಹಿಸಲಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ವರ್ಷದ ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:ಇನ್ಸ್​​ಟಾದಲ್ಲಿ ಧೋನಿ ಫೋಟೋ ಹಂಚಿಕೊಂಡ WWE ಸೂಪರ್​​ ಸ್ಟಾರ್ ಜಾನ್ ಸೀನಾ

ABOUT THE AUTHOR

...view details