ಜಲೌನ್ (ಉತ್ತರ ಪ್ರದೇಶ):ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕರ್ನಾಟಕ ಮೂಲದ ಐವರು ಆರೋಪಿಗಳನ್ನು ಲಕ್ನೋದ ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ. ಸ್ಪೆಷಲ್ ಆಪರೇಷನ್ ಗ್ರೂಪ್ ಎಸ್‌ಒಜಿ ಮತ್ತು ಕೊತ್ವಾಲಿ ಪೊಲೀಸ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಉತ್ತರ ಕನ್ನಡ ಜಿಲ್ಲೆಯ ಆರೀಫ್, ಮೊಹಮ್ಮದ್ ಗೌಸ್, ಅನೀಸ್ ಶೇಖ್, ಆಸಿಫ್ ಶೇಖ್ ಮತ್ತು ಅರ್ಸ್ಲಾನ್ ಎಂಬವರನ್ನು ಸೆರೆ ಹಿಡಿದಿದ್ದಾರೆ. ಆರೋಪಿತರಿಂದ ಲಕ್ನೋ ನೋಂದಣಿಯ ಒಂದು ಹೋಂಡಾ ಸಿಟಿ ಕಾರು, 1.55 ಲಕ್ಷ ರೂಪಾಯಿ ಹಾಗೂ ಎರಡು ಪಿಸ್ತೂಲ್‌ಗಳ ಜೊತೆಗೆ ಕಾಟ್ರಿಡ್ಜ್‌ಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿ ಗಿರ್ಜಾ ಶಂಕರ್ ತ್ರಿಪಾಠಿ ಮಾಹಿತಿ ನೀಡಿದರು. ಆರೋಪಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಖಚಿತ ಮಾಹಿತಿ ಪಡೆದು ಕಾರಿನಲ್ಲಿ ತೆರಳುತ್ತಿದ್ದಾಗ ಐವರನ್ನು ತಡೆಯಲು ಪೊಲೀಸರು ಯತ್ನಿಸಿದ್ದು, ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರೂ ದಾಳಿ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳು ಸೇರಿ ಐವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಒಬ್ಬ ಪೊಲೀಸ್ ಪೇದೆಯೂ ಗಾಯಗೊಂಡಿದ್ದಾರೆ.
ಆರೋಪಿಗಳು ಕೃತ್ಯ ಎಸಗಿದ ನಂತರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪಲಾಯಣ ಮಾಡಿ ಮತ್ತದೇ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು. ಪ್ರಕರಣದಲ್ಲಿ ಇನ್ನಿಬ್ಬರ ಹೆಸರನ್ನು ಆರೋಪಿಗಳು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಅವರನ್ನು ಬಂಧಿಸಲು ಮತ್ತೆ ಎರಡು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಆರೋಪಿಗಳು ಬಾರಾಬಂಕಿ ಜಿಲ್ಲೆಯ ಪ್ರದೇಶವೊಂದರಲ್ಲಿ ವಾಸಿಸುತ್ತಿದ್ದರು. ಗಾಯಾಳು ಪೊಲೀಸ್ ಪೇದೆ ಮತ್ತು ಇಬ್ಬರು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಎಸ್ಐ ಪಿಸ್ತೂಲ್ ಕದ್ದು, ಪೊಲೀಸರ ಮೇಲೆಯೇ ಗುಂಡು ಹಾರಿಸಿದ ವ್ಯಕ್ತಿ: ವಿಡಿಯೋ ನೋಡಿ