ನವದೆಹಲಿ:ಅಕ್ರಮ ಹಣ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಾದರು. ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವ ಬೆನ್ನಲ್ಲೇ ಡಿಕೆಶಿ ಇಡಿ ವಿಚಾರಣೆಗೆ ಹಾಜರಾಗಿದ್ದು, ಅವರಿಗೆ ತುಸು ಇರಿಸುಮುರಿಸು ಉಂಟುಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೀಗಾಗಿ, ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿರುವ ಕಚೇರಿಗೆ ಹಾಜರಾಗಿದ್ದಾರೆ. ಸಹೋದರ ಡಿ.ಕೆ.ಸುರೇಶ್ ಜೊತೆಗಿದ್ದರು.
ಅಧಿಕಾರಿಗಳ ಮುಂದೆ ಹಾಜರಾಗುವುದಕ್ಕೂ ಮುಂಚೆ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಯಾವ ಕಾರಣಕ್ಕಾಗಿ ಸಮನ್ಸ್ ನೀಡಿದ್ದಾರೆಂಬುದು ಗೊತ್ತಿಲ್ಲ ಎಂದರು.
ಜಾರಿ ನಿರ್ದೇಶನಾಯಲಯದ ಮುಂದೆ ಡಿಕೆಶಿ ಹಾಜರು ಇದನ್ನೂ ಓದಿ:ಅಧಿವೇಶನಕ್ಕೆ ಡಿಕೆಶಿ ಅಲಭ್ಯ: ಇಡಿ ವಿಚಾರಣೆ ಹಿನ್ನೆಲೆ ದಿಲ್ಲಿಗೆ ಪ್ರಯಾಣ
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದ ಇಡಿ ಈಗಾಗಲೇ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ನ್ಯಾಯಾಲಯದಲ್ಲಿ ವಿಚಾರಣೆ ಕೂಡ ಪ್ರಗತಿಯಲ್ಲಿದೆ. ಈ ನಡುವೆ ಜಾರಿ ನಿರ್ದೇಶನಾಲಯ ಹೆಚ್ಚುವರಿ ಎಫ್‍ಐಆರ್ ದಾಖಲಿಸಿದ್ದು, ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ 2019 ರಲ್ಲಿ ಬಂಧನಕ್ಕೊಳಗಾಗಿದ್ದ ಡಿಕೆಶಿ ತದನಂತರ ಜಾಮೀನಿನಲ್ಲಿ ಹೊರಬಂದಿದ್ದರು.
ಕರ್ನಾಟಕ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು, ಇದರಿಂದಲೂ ಡಿಕೆಶಿ ಹೊರಗುಳಿಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ: ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಂಸದ, ಡಿಕೆಶಿ ಸಹೋದರ ಡಿ.ಕೆ.ಸುರೇಶ್, ಯಾವ ಪ್ರಕರಣಕ್ಕಾಗಿ ನೋಟಿಸ್ ನೀಡಿದ್ದಾರೆಂಬುದು ಗೊತ್ತಿಲ್ಲ. ಕೇಂದ್ರ ತನಿಖಾ ಏಜೆನ್ಸಿಗಳ ದುರ್ಬಳಕೆ ಮಾಡಿಕೊಂಡಿದೆ. ಇದು ರಾಜಕೀಯ ದ್ವೇಷ. ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇದೆ. ಪ್ರತಿಪಕ್ಷಗಳನ್ನು ಈ ರೀತಿಯಾಗಿ ಬೆದರಿಸುವ ಹುನ್ನಾರ ನಡೆಸಿದೆ. ಇಡಿ ಕಚೇರಿ ಇದೀಗ ಬಿಜೆಪಿ ಆಫೀಸ್ ಆಗಿದೆ ಎಂದಿದ್ದಾರೆ.