ನವದೆಹಲಿ:ಕಾಂಗ್ರೆಸ್ ಪಕ್ಷಕ್ಕೆ ಕಗ್ಗಂಟಾಗಿರುವ, ದೆಹಲಿ ನಾಯಕರ ಅಂಗಳದಲ್ಲಿರುವ ಕರ್ನಾಟಕ ಸಿಎಂ ಆಯ್ಕೆ ವಿಚಾರ ಸಂಬಂಧ ತುರುಸಿನ ಚಟುವಟಿಕೆಗಳು ಸಾಗಿವೆ. ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಇಂದು ದೆಹಲಿಗೆ ಬಂದಿದ್ದು, ಇತ್ತ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ಚರ್ಚೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಹಾತೊರೆಯುತ್ತಿರುವ ಕಾಂಗ್ರೆಸ್ಗೆ ಸಿಎಂ ಆಯ್ಕೆ ಕಸರತ್ತು ಅಷ್ಟು ಸಲೀಸಾಗಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೀ ಕೊಡೆ ನಾ ಬಿಡೆ ಎಂಬಂತಾಗಿದೆ. ಯಾವುದೇ ಸಂಧಾನಕ್ಕೂ ಅವರು ಸಲೀಸಾಗಿ ಒಪ್ಪಿಕೊಳ್ಳುವ ಸಾಧ್ಯತೆಯೂ ಕಡಿಮೆ ಇದೆ.
ಖರ್ಗೆ ಜೊತೆ ರಾಹುಲ್ ಚರ್ಚೆ:ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸುತ್ತಿದ್ದು, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಖರ್ಗೆ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಿರಿಯ ಮುಖಂಡರು ಇದ್ದರು.
ಇನ್ನೂ, ಸೋನಿಯಾ ಗಾಂಧಿ ಅವರು ಸದ್ಯ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿದ್ದಾರೆ. ಅವರ ಬಳಿ ಈಗಾಗಲೇ ಸಿಎಂ ಆಯ್ಕೆ ಸಂಬಂಧ ನಡೆದ ರಹಸ್ಯ ಮತದಾನದ ಬಗ್ಗೆ ಮಾಹಿತಿ ನೀಡಲಾಗಿದೆ. ಇಂದು ಕಾಂಗ್ರೆಸ್ ಅಧ್ಯಕ್ಷರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಚರ್ಚಿಸಿದ ಬಳಿಕ, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಸಿದ್ದು ಠಿಕಾಣಿ:ಸಿಎಂ ಸ್ಥಾನಕ್ಕಾಗಿ ದೊಡ್ಡ ಲಾಬಿ ನಡೆಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸೋಮವಾರ ಮಧ್ಯಾಹ್ನವೇ ದೆಹಲಿಗೆ ಆಗಮಿಸಿದ್ದಾರೆ. ಇಲ್ಲಿಯೇ ಉಳಿದುಕೊಂಡಿರುವ ಅವರು ತಮ್ಮನ್ನು ಪೂರ್ಣಾವಧಿಗೆ ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ದೆಹಲಿಗೆ ಬಂದ ಡಿಕೆಶಿ:ಇನ್ನೊಂದೆಡೆ ಸಿಎಂ ಆಯ್ಕೆ ವಿಚಾರವಾಗಿ ಚರ್ಚಿಸಲು ದೆಹಲಿಗೆ ಆಗಮಿಸಲು ಹೈಕಮಾಂಡ್ ಸೋಮವಾರ ಸೂಚನೆ ನೀಡಿತ್ತು. ಆದರೆ, ಹೊಟ್ಟೆನೋವಿನ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿ ಭೇಟಿಯನ್ನು ರಾತ್ರಿ ರದ್ದು ಮಾಡಿದ್ದರು. ಇಂದು ಮಧ್ಯಾಹ್ನ ದೆಹಲಿಗೆ ಬಂದಿರುವ ಅವರು ಸಂಸದ ಡಿಕೆ ಸುರೇಶ್ ಅವರ ಕಚೇರಿಯಲ್ಲಿ ಉಳಿದುಕೊಂಡಿದ್ದಾರೆ. ನಂತರ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಲಿದ್ದು, ಸಿಎಂ ಆಯ್ಕೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ, ಬೆಂಗಳೂರಿನಿಂದ ದೆಹಲಿಗೆ ಹೊರಡುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಿಕೆಶಿ, "ಪಕ್ಷವೇ ನನಗೆ ದೇವರು. ನಮ್ಮದು ಒಗ್ಗಟ್ಟಿನ ಮನೆ. 135 ಸ್ಥಾನಗಳಲ್ಲಿ ಆರಿಸಿ ಬಂದಿದ್ದೇವೆ. ನಾನು ಪಕ್ಷದ ಅಧ್ಯಕ್ಷ. ಕಾಂಗ್ರೆಸ್ ಪಕ್ಷವೇ ನನ್ನ ದೇಗುಲ. ಪಕ್ಷವು ತಾಯಿಯಂತಿದೆ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ" ಎಂದು ಹೇಳಿದರು.
"ಮಕ್ಕಳಿಗೆ ಏನು ನೀಡಬೇಕೆಂದು ದೇವರು ಮತ್ತು ತಾಯಿಗೆ ತಿಳಿದಿದೆ. ನಾನು ನನ್ನ ದೇವರನ್ನು ದೇವಸ್ಥಾನದಲ್ಲಿ ಭೇಟಿಯಾಗಲಿದ್ದೇನೆ. ನನಗೆ ಯಾವುದೇ ಶಾಸಕರ ಬೆಂಬಲ ಇಲ್ಲ. ನಂಬರ್ ಲೆಕ್ಕಾಚಾರ ನನ್ನಲ್ಲಿಲ್ಲ. ನಾನು ಒಬ್ಬನೇ ದೆಹಲಿಗೆ ಹೋಗುವೆ ಎಂದು ಶಿವಕುಮಾರ್ ಹೇಳಿದರು.
ಈಚೆಗೆ ಮುಗಿದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದ್ದರೆ, ಆಡಳಿತಾರೂಢ ಬಿಜೆಪಿ ಕೇವಲ 66 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ. ಕಿಂಗ್ ಮೇಕರ್ ಪಾತ್ರವನ್ನು ವಹಿಸುವ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಧೂಳಿಪಟವಾಗಿ 19 ಸ್ಥಾನಗಳಿಗೆ ಕುಸಿದಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿಲ್ಲ:ಸಿಎಂ ಹುದ್ದೆ ಸಿಗದಿದ್ದರೆ, ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಡಿಕೆಶಿ, ನಾನು ಯಾವುದೇ ರೀತಿಯ ನಿರ್ಧಾರಕ್ಕೆ ಬಂದಿಲ್ಲ. ಹಾಗೊಂದು ವೇಳೆ ಯಾವುದೇ ಮಾಧ್ಯಮಗಳು ಸುದ್ದಿ ಭಿತ್ತರಿಸಿದರೆ, ಮಾನಹಾನಿ ಕೇಸ್ ಹಾಕುವೆ. ನನಗೆ ಪಕ್ಷವೇ ತಾಯಿ. ನನ್ನ ಜೊತೆ ನಾಯಕರು, ಶಾಸಕರು ಇದ್ದಾರೆ ಎಂದು ಹೇಳಿದರು.
ಓದಿ:ಸಿಎಂ ಆಯ್ಕೆ ಬಿಕ್ಕಟ್ಟು: ದೆಹಲಿಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್