ಹೈದರಾಬಾದ್ (ತೆಲಂಗಾಣ): ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಲ್ಲಿನ ಗಡಿ ಗ್ರಾಮಗಳು ಮತ್ತು ಜಿಲ್ಲೆಗಳನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸುವ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕರ್ನಾಟಕದಲ್ಲಿ ಬಿಜೆಪಿಯಿಂದಲೂ ಬೆಂಬಲವಿದೆ ಎಂಬುದಕ್ಕೆ ರಾಯಚೂರು ಶಾಸಕರೊಬ್ಬರ ಹೇಳಿಕೆ ಪೂರಕವಾಗಿದೆ ಎಂದು ತೆಲಂಗಾಣ ಸಚಿವ ಕೆಟಿಆರ್ ತಿಳಿಸಿದ್ದಾರೆ.
ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪಾಲ್ಗೊಂಡಿದ್ದರು. ಈ ವೇಳೆ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ತಮ್ಮ ಜಿಲ್ಲೆ ಹಿಂದುಳಿದಿರುವುದಾಗಿ ಹೇಳಿ, ರೈತರ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳನ್ನು ಉಲ್ಲೇಖಿಸಿ ಮಾತನಾಡಿದ್ದರು. ಆದರೆ ಇವರು ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ತೆಲಂಗಾಣ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮ ರಾವ್ ಅವರು ಇದನ್ನು ಸ್ವಾಗತಿಸಿದ್ದಾರೆ.
"ಉತ್ತರ ಕರ್ನಾಟಕ ಅಂದ್ರೆ ಹುಬ್ಬಳ್ಳಿ, ಧಾರಾವಾಡ, ಬೆಳಗಾವಿ.. ಹೈದರಾಬಾದ್ ಕರ್ನಾಟಕ ಅಂದ್ರೆ ಗುಲ್ಬರ್ಗ, ಬೀದರ್. ನಮ್ಮ ರಾಯಚೂರನ್ನು ಸುಮ್ನೆ ತೆಲಂಗಾಣಕ್ಕೆ ಸೇರಿಸಿಬಿಡಬೇಕು. ಸ್ವಲ್ಪ ನಿಮ್ಮಂತ ಹಿರಿಯರು, ಸಂಪುಟ ಸಚಿವರು ನಮ್ಮ ರಾಯಚೂರಿಗೆ ಜೀವ ತುಂಬಬೇಕು, ಸತ್ತ ಹೆಣಗಳಾದಂಗೆ ಆಗಿದೀವಿ ನಾವು. ನಮ್ಮ ದನಿ ಯಾರಿಗೂ ಕೇಳ್ತಾ ಇಲ್ಲ. ಪ್ರತಿಭಟನೆ ಮಾಡೋದೊಂದೆ ನಮಗೆ ಉಳಿದಿರೋ ದಾರಿ" ಎಂದು ಶಾಸಕ ಶಿವರಾಜ್ ಪಾಟೀಲ್ ಅವರು ಸಚಿವ ಪ್ರಭು ಚವ್ಹಾಣ್ ಬಳಿ ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ಪ್ರತಿಯೊಬ್ಬರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.
ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ವಿಡಿಯೋ ತುಣುಕೊಂದನ್ನು ಕೃಷ್ಣನ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ರಿಟ್ವೀಟ್ ಮಾಡಿರುವ ಸಚಿವ ಕೆಟಿಆರ್, "ಕರ್ನಾಟಕದ ಬಿಜೆಪಿ ಶಾಸಕರು ರಾಯಚೂರನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕು ಎಂದು ಹೇಳಿದ್ದಾರೆ, ಈ ಸಲಹೆಯನ್ನು ಪ್ರೇಕ್ಷಕರು ಕೂಡ ಚಪ್ಪಾಳೆಯೊಂದಿಗೆ ಸ್ವಾಗತಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.