ನವದೆಹಲಿ:ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 124 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮಖದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ಆರಂಭವಾಗಿದೆ.
ಇದನ್ನೂ ಓದಿ:ಗುರುವಾರ ಇಲ್ಲವೇ ಶುಕ್ರವಾರ ಹಾಸನದ ಟಿಕೆಟ್ ಫೈನಲ್ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಇಲ್ಲಿನ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ ಮತ್ತು ಹಿರಿಯ ನಾಯಕರಾದ ಮುಕುಲ್ ವಾಸ್ನಿಕ್, ರಣ್ದೀಪ್ ಸಿಂಗ್ ಸುರ್ಜೇವಾಲಾ, ಅಂಬಿಕಾ ಸೋನಿ, ಮೊಹ್ಸಿನಾ ಕಿದ್ವಾಯಿ, ಕೆ ಸಿ ವೇಣುಗೋಪಾಲ್, ಡಾ. ಜಿ ಪರಮೇಶ್ವರ್, ಬಿ ಕೆ ಹರಿಪ್ರಸಾದ್, ಎಂಬಿ ಪಾಟೀಲ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದಾರೆ.
ಈ ಸಭೆಗೂ ಮುನ್ನ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇಂದು ನಮ್ಮ ಆಯ್ಕೆ ಸಮಿತಿಯ ಸಭೆ ಇದೆ. ಉಳಿದ 100 ಸ್ಥಾನಗಳ ಬಗ್ಗೆ ಚರ್ಚಿಸಲಾಗುವುದು. ಸಮಿತಿಯಲ್ಲಿರುವವರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈ ಮೊದಲು ಪ್ರಕಟಿಸಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಒಳಗೊಂಡಂತೆ 124 ಜನ ಅಭ್ಯರ್ಥಿಗಳು ಹೆಸರನ್ನು ಪ್ರಕಟಿಸಲಾಗಿತ್ತು.