ಕೋಯಿಕೋಡ್:1498 ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ ಕೇರಳದ ಇಂದಿನ ಕೋಯಿಕೋಡ್ ಜಿಲ್ಲೆಯ ಕಪ್ಪಾದ್ ಕರಾವಳಿಗೆ ಮೊದಲ ಬಾರಿ ಬಂದಿಳಿದ ಎಂದು ಇತಿಹಾಸ ಹೇಳುತ್ತೆ. ಅಂದಿನಿಂದ ಭಾರತದಲ್ಲಿ ವಿದೇಶಿಗರ ಆಕ್ರಮಣ ಆರಂಭವಾಯಿತು ಅನ್ನೋದನ್ನು ನಾವು ಇತಿಹಾಸದಲ್ಲಿ ಓದುತ್ತೇವೆ.
ಹೀಗೆ ದೇಶದ ಚರಿತ್ರೆಯೊಂದಿಗೆ ಥಳುಕು ಹಾಕಿಕೊಂಡಿರುವ ಈ ಕಪ್ಪಾದ್ ಬೀಚ್ ಇಂದು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ. ಕೋಯಿಕೋಡ್ ಜಿಲ್ಲೆಯ ಚೆಮಂಚೇರಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಪ್ಪಾದ್ ಬೀಚ್ ಸೌಂದರ್ಯ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. 2020ರಲ್ಲಿ ಪರಿಸರ ಸ್ನೇಹಿ ಕಡಲತೀರಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡಲಾಯಿತು. ಈ ವೇಳೆ ಕಪ್ಪಾದ್ ಬೀಚ್‌ಗೆ ಬ್ಲ್ಯೂ ಫ್ಲ್ಯಾಗ್ ಪ್ರಮಾಣೀಕರಣ ದೊರೆತಿದೆ. ಕೇರಳ ಸರ್ಕಾರ 99 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರೀನ್ ಕಾರ್ಪೆಟ್ ಯೋಜನೆಯನ್ನು ಇಲ್ಲಿ ಜಾರಿಗೆ ತಂದಿದೆ.
ಕಪ್ಪಾದ್ ಬೀಚ್‌ನಲ್ಲಿ ಬೆಂಚುಗಳನ್ನು ಹಾಕಿದ್ದು ಪ್ರವಾಸಿಗರಿಗೆ ಕುಳಿತು ರಮಣೀಯ ಕಡಲ ಕಿನಾರೆಯನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕುಡಿಯುವ ನೀರಿನ ಸೌಲಭ್ಯ, ವಿಶ್ರಾಂತಿ ಕೊಠಡಿಗಳು, ಸಿಸಿಟಿವಿ ಕ್ಯಾಮರಾಗಳು, ಆಟದ ಉಪಕರಣ, ವಾಕಿಂಗ್ ಮಾರ್ಗ, ಸ್ನ್ಯಾಕ್ ಬಾರ್ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಲು ವಿಶೇಷ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.
ಕಪ್ಪಾದ್ ಬೀಚ್‌ನಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸುವಾಗ ಇಲ್ಲಿ ನಡೆದ ಕಾಮಗಾರಿಯೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಹೊಸ ಕಾಂಕ್ರೀಟ್ ನಿರ್ಮಾಣ ಕಾರ್ಯವನ್ನು ಸಾಧ್ಯವಾದಷ್ಟು ತಪ್ಪಿಸಲಾಗಿದೆ. ಬದಲಾಗಿ, ದೆಹಲಿಯಿಂದ ತಂದ ಬಿದಿರುಗಳನ್ನು ನಿರ್ಮಾಣ ಸಾಮಗ್ರಿಯಾಗಿ ಬಳಸಲಾಗಿದೆ. ಕಡಲತೀರದ ಪಾಲನೆ ಮತ್ತು ನಿರ್ವಹಣೆಗಾಗಿ 30 ಸಿಬ್ಬಂದಿ ನೇಮಿಸಲಾಗಿದೆ. ಬೀಚ್ನ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಯಸ್ಕರಿಗೆ 25 ರೂ ಮತ್ತು 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕ ಪಡೆಯಲಾಗುತ್ತದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉಚಿತವಾಗಿ ಪ್ರವೇಶ ಲಭ್ಯವಿದೆ.
ಪ್ರವಾಸಿಗರಿಂದಾಗಿ ಬೀಚ್ ಸದಾ ಗದ್ದಲದಿಂದ ಕೂಡಿರುತ್ತದೆ. ಇದರಿಂದ ಇಲ್ಲಿರುವ ಅಂಗಡಿ ಮಾಲೀಕರು ಸಹ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕಪ್ಪಾದ್ ಪ್ರವಾಸೋದ್ಯಮ ಕೇಂದ್ರ ಸಂಪೂರ್ಣವಾಗಿ ಬದಲಾಗುತ್ತಿದ್ದಂತೆ, ಕಾಡು ಪೊದೆಗಳಿಂದ ಮುಚ್ಚಲಾಗಿದ್ದ ವಾಸ್ಕೋಡಿಗಾಮ ಸ್ಮಾರಕವನ್ನು ಈಗ ತೆರೆಯಲಾಗಿದೆ.