ನವದೆಹಲಿ:ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ಯುಪಿಯ ಲಖೀಂಪುರ್ ಕೇರಿ ಹಿಂಸಾಚಾರ ಪ್ರಕರಣದ ಸಂಬಂಧ ಸುಮೋಟೋ ದಾಖಲಿಸಿಕೊಳ್ಳದ ಸುಪ್ರೀಂಕೋರ್ಟ್ ನಡೆ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕೀಲ ಕಪಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯೂಟ್ಯೂಬ್, ಸಾಮಾಜಿಕ ಮಾಧ್ಯಮಗಳು ಇಲ್ಲದ ಒಂದು ಕಾಲವಿತ್ತು. ಆಗ ಸುಪ್ರೀಂಕೋರ್ಟ್ ಮುದ್ರಣ ಮಾಧ್ಯಮಗಳ ಸುದ್ದಿ ಆಧರಿಸಿ ಸುಮೋಟೋ ದಾಖಲಿಸಿಕೊಳ್ಳುತ್ತಿತ್ತು. ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗಿದೆ. ಇಂದು ನಾಗರಿಕರ ಮೇಲೆ ವಾಹನ ಹರಿದು ಕೊಲ್ಲಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದ ಲಖೀಂಪುರ್ ಖೇರಿಯ ಹಿಂಸಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಸಿಬಲ್ ಕಳೆದ ಸೋಮವಾರ ಒತ್ತಾಯಿಸಿದ್ದರು. ಒಬ್ಬ ಪ್ರಜೆಯಾಗಿ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದರು.