ಲಖನೌ (ಉತ್ತರ ಪ್ರದೇಶ):ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕ ಕಪಿಲ್ ಸಿಬಲ್ ಬಿಗ್ ಶಾಕ್ ನೀಡಿದ್ದಾರೆ. ಮೇ 16ರಂದೇ ಕೈ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಅವರು, ಇದೀಗ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಇಂದು ಉತ್ತರ ಪ್ರದೇಶದ ಲಖನೌದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಸಿಬಲ್ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 16ರಂದೇ ಕಾಂಗ್ರೆಸ್ ತೊರೆದಿರುವ ಬಗ್ಗೆ ಬಹಿರಂಗ ಪಡಿಸಿದರು. ಅಲ್ಲದೇ, ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿರುವೆ. ನನಗೆ ಬೆಂಬಲ ನೀಡಿರುವ ಅಖಿಲೇಶ್ ಯಾದವ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರಿಗೂ ಕೃತಜ್ಞತೆ ಸಲ್ಲಿಸಿರುವ ಕಪಿಲ್ ಸಿಬಲ್, ಈಗಷ್ಟೇ ಅಲ್ಲ, ಹಲವಾರು ವರ್ಷಗಳಿಂದ ಅಜಂ ಖಾನ್ ನನಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು. ಪ್ರತಿಯೊಬ್ಬರು ಆಯಾ ಪಕ್ಷಗಳ ಸದಸ್ಯರಾಗಿ ಆ ಪಕ್ಷದ ಶಿಸ್ತನ್ನು ಪಾಲಿಸಬೇಕೆಂಬ ನಿರ್ಬಂಧಕ್ಕೆ ಒಳಗಿರುತ್ತವೆ. ಆದರೂ, ಸ್ವತಂತ್ರ ಧ್ವನಿಯನ್ನು ಹೊಂದಿರುವುದು ತುಂಬ ಮುಖ್ಯ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ಗೆ ಕುಟುಕಿದರು.
ಮೋದಿ ವಿರುದ್ಧ ವಾಗ್ದಾಳಿ: ಇದೇ ವೇಳೆ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್ ಸಿಬಲ್, ನಾವು ಪ್ರತಿಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮೋದಿ ಸರ್ಕಾರವನ್ನು ವಿರೋಧಿಸಲು ಬಯಸುತ್ತೇವೆ. ಜೊತೆಗೆ ಬಿಜೆಪಿ ವಿರೋಧಿ ವಾತಾವರಣ ಸೃಷ್ಟಿಸಲು ಯತ್ನಿಸುತ್ತೇವೆ. ಆ ನಿಟ್ಟಿನಲ್ಲಿ ನಾನು ವೈಯಕ್ತಿಕವಾಗಿಯೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.