ಕಾನ್ಪುರ (ಉತ್ತರ ಪ್ರದೇಶ): ಇಂದಿರಾ ಗಾಂಧಿ ಅವರ ಹತ್ಯೆ ಹಿನ್ನೆಲೆ 1984 ರಲ್ಲಿ ಕಾನ್ಪುರದಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದುವರೆಗೆ ಕನಿಷ್ಠ 41 ಆರೋಪಿಗಳನ್ನು ಬಂಧಿಸಲಾಗಿದೆ. ಈ ದಂಗೆಯಲ್ಲಿ 127 ಜನ ಮೃತಪಟ್ಟಿದ್ದರು. ವಿಶೇಷ ತನಿಖಾ ತಂಡ (SIT) ಇದರ ತನಿಖೆಯನ್ನು ಬುಧವಾರ ಕೊನೆಗೊಳಿಸಿದೆ.
ಆದರೆ, ಇನ್ನೂ ಕೆಲವು ಆರೋಪಿಗಳನ್ನು ಬಂಧಿಸಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಾಹಿತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಲಾಗಿದೆ. ಅಧಿಕಾರಾವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಿದರೆ, ಸರಿಯಾದ ಸಮಯದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಡಿಐಜಿ ಬಲೇಂದು ಭೂಷಣ್ ಸಿಂಗ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್‌ಐಟಿ ಅವಧಿಯನ್ನು ಒಂದು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ. ಬುಧವಾರ ತಡರಾತ್ರಿ ಈ ಕುರಿತು ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.