ಕಂಕೇರ್ (ಛತ್ತೀಸ್ಗಡ್): ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮೂರು ಕಡೆ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ರಾಜಸ್ಥಾನ, ಛತ್ತೀಸ್ಗಡ್ ಮತ್ತು ಮಧ್ಯಪ್ರದೇಶದಲ್ಲಿ ಕಮಲ ಅರಳಿದ್ದು, ಇನ್ನೊಂದೆಡೆ ತೆಲಂಗಾಣದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆದಿದೆ. ಛತ್ತೀಸ್ಘಡದಲ್ಲೂ ಚುನಾವಣೋತ್ತರ ಸಮೀಕ್ಷೆಗಳನ್ನು ಮೀರಿ ಬಿಜೆಪಿ ಗೆಲುವು ದಾಖಲಿಸಿದೆ. ಛತ್ತೀಸ್ಘಡದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 54 ಸ್ಥಾನ, ಕಾಂಗ್ರೆಸ್ 35, ಇತರರು 1 ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ.
ಇಲ್ಲಿನ ಕಂಕೇರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಕೆಲವೇ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಂಕೇರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ರಾಮ್ ನೇತಮ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಧ್ರುವ ಅವರನ್ನು ಕೇವಲ 16 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮತ ಎಣಿಕೆ ಸಂದರ್ಭ ಇಬ್ಬರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಆಶಾರಾಮ್ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಆಶಾರಾಮ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಧ್ರುವ ಅಂತಿಮ ಸುತ್ತಿನ ಮತ ಎಣಿಕೆವರೆಗೆ ಭರ್ಜರಿ ಪೈಪೋಟಿ ನೀಡಿದರು. ಆದರೂ ಅಂತಿಮ ಸುತ್ತಿನಲ್ಲಿ ಕೇವಲ 16 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಧ್ರುವ ಸೋಲನುಭವಿಸಬೇಕಾಯಿತು. ಬಿಜೆಪಿ ಅಭ್ಯರ್ಥಿ ಆಶಾರಾಮ್ 67,980 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಧ್ರುವ್ 67,964 ಮತಗಳನ್ನು ಪಡೆದರು. ಇದು 2023ರ ಛತ್ತೀಸ್ಗಢ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದ ಗೆಲುವಾಗಿದೆ. ಏಳು ಗಂಟೆಗಳ ಸುದೀರ್ಘ ಮತ ಎಣಿಕೆ ವೇಳೆ ಇಬ್ಬರು ಒಂದೊಂದು ಸುತ್ತಿನಲ್ಲಿ ಹಿನ್ನಡೆ ಮತ್ತು ಮುನ್ನಡೆಯನ್ನು ಅನುಭವಿಸುತ್ತಿದ್ದರು. ಆದರೆ ಕೊನೆಯ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಆಶಾರಾಮ್ ಗೆಲುವಿನ ನಗೆ ಬೀರಿದ್ದಾರೆ.