ಹೈದರಾಬಾದ್: ಟೆಲಿವಿಷನ್ ಸಂದರ್ಶನವೊಂದರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಈಗಾಗಲೇ ಪಕ್ಷ ಅಮಾನತುಗೊಳಿಸಿದೆ. ಹೇಳಿಕೆ ಕುರಿತು ಈಗಾಗಲೇ ಕ್ಷಮೆ ಯಾಚಿಸಿರುವ ಶರ್ಮಾ, ತಮ್ಮ ಮಾತುಗಳನ್ನು ಹಿಂಪಡೆದಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ವೊಂದನ್ನ ಹಾಕಿದ್ದು, ನೂಪುರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ನಟಿ ಕಂಗನಾ ರಣಾವತ್, 'ನೂಪುರ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಅರ್ಹತೆ ಹೊಂದಿದ್ದಾರೆ. ಅವರಿಗೆ ಎಲ್ಲೆಡೆಯಿಂದ ಬರುತ್ತಿರುವ ಬೆದರಿಕೆ ಕರೆಗಳನ್ನ ನಾನು ನೋಡುತ್ತಿದ್ದೇನೆ. ನಿತ್ಯ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದಾಗ ನಾವು ನ್ಯಾಯಾಲಯ ಮೊರೆ ಹೋಗಬೇಕು. ದೇಶದಲ್ಲಿ ಚುನಾಯಿತ ಬಿಜೆಪಿ ಸರ್ಕಾರವಿದೆ. ಇದು ಅಫ್ಘಾನಿಸ್ತಾನ ಅಲ್ಲ, ನಿಮ್ಮ ವಿಚಾರವನ್ನು ನ್ಯಾಯಾಲಯದಲ್ಲಿ ಹಂಚಿಕೊಳ್ಳಿ' ಎಂದು ಹೇಳಿದ್ದಾರೆ.