ನವದೆಹಲಿ:ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಬುಧವಾರ ಇಸ್ರೇಲ್ ರಾಯಭಾರಿ ನೌರ್ ಗಿಲಾನ್ ಅವರನ್ನು ಭೇಟಿ ಮಾಡಿ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ವಿಜಯಶಾಲಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತನ್ನ ಮುಂದಿನ ಸಿನಿಮಾ 'ತೇಜಸ್' ಪ್ರಚಾರದಲ್ಲಿರುವ ನಟಿ, ಇಸ್ರೇಲ್ ರಾಯಭಾರಿಯೊಂದಿಗೆ ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ನಡೆಸಿದ ಸಂವಾದದ ಫೋಟೋ ಹಾಗು ವಿಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಜಿ ಅವರೊಂದಿಗೆ ಅತ್ಯಂತ ಭಾವಪೂರ್ಣ ಚರ್ಚೆ ನಡೆಸಿದ್ದೇನೆ. ಇಂದು ಇಡೀ ಜಗತ್ತು, ವಿಶೇಷವಾಗಿ ಇಸ್ರೇಲ್ ಮತ್ತು ಭಾರತವು ಭಯೋತ್ಪಾದನೆಯ ವಿರುದ್ಧ ಸಂಘರ್ಷ ನಡೆಸುತ್ತಿದೆ. ಮಂಗಳವಾರ ನಾನು ರಾವಣನ ಪ್ರತಿಕೃತಿ ದಹನಕ್ಕಾಗಿ ದೆಹಲಿಗೆ ಬಂದಾಗ, ಇಸ್ರೇಲ್ ರಾಯಭಾರ ಕಚೇರಿಗೆ ಭೇಟಿ ನೀಡಿದೆ. ಇಂದಿನ ಆಧುನಿಕ ರಾವಣ ಮತ್ತು ಹಮಾಸ್‌ನಂತಹ ಭಯೋತ್ಪಾದಕರನ್ನು ಸೋಲಿಸುವವರನ್ನು ಭೇಟಿಯಾಗಬೇಕು ಎಂದು ನನಗನ್ನಿಸಿತು" ಎಂದು ರಾಷ್ಟ್ರ ರಾಜಧಾನಿಯ ಪ್ರಸಿದ್ಧ ಲವ್ ಕುಶ್ ರಾಮಲೀಲಾದಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿ ಕಂಗನಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.
"ಸಣ್ಣ ಮಕ್ಕಳು ಮತ್ತು ಮಹಿಳೆಯರ ಮೇಲಿನ ಹಮಾಸ್ ಉಗ್ರರ ದೌರ್ಜನ್ಯ ಹೃದಯ ವಿದ್ರಾವಕವಾಗಿದೆ. ಭಯೋತ್ಪಾದನೆ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್ ಜಯಗಳಿಸಲಿದೆ ಎಂದು ನನಗೆ ಸಂಪೂರ್ಣ ಭರವಸೆ ಇದೆ. ನಾನು ಅವರೊಂದಿಗೆ ನನ್ನ ಮುಂಬರುವ ಚಿತ್ರ 'ತೇಜಸ್' ಮತ್ತು ಭಾರತದ ಸ್ವಾವಲಂಬಿ ಯುದ್ಧ ವಿಮಾನ ತೇಜಸ್ ಬಗ್ಗೆ ಚರ್ಚಿಸಿದ್ದೇನೆ. ನನ್ನ ಹೃದಯವು ಇಸ್ರೇಲ್ಗಾಗಿ ಮಿಡಿಯುತ್ತಿದೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನೂರ್ ಗಿಲಾನ್ ಅವರೊಂದಿಗಿನ ನನ್ನ ಸಂಭಾಷಣೆ ಇಲ್ಲಿದೆ" ಎಂದು ತಿಳಿಸಿದ್ದಾರೆ.