ಮುಂಬೈ:ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ಮೂಲಕ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಕೆ ಮಾಡಿದ್ದಕ್ಕಾಗಿ ಮುಂಬೈನಲ್ಲಿ ಎಫ್ಐಆರ್ ದಾಖಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ, ದೆಹಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿ ಉಪನಗರ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಕಂಗನಾ ರಣಾವತ್ ರೈತರ ಪ್ರತಿಭಟನೆಯನ್ನ ಉದ್ದೇಶಪೂರ್ವಕವಾಗಿ ಖಾಲಿಸ್ತಾನ ಆಂದೋಲನಕ್ಕೆ ಹೋಲಿಕೆ ಮಾಡಿದ್ದು, ಸಿಖ್ ಸಮುದಾಯವನ್ನ ಖಾಲಿಸ್ತಾನ ಉಗ್ರರು ಎಂದು ಕರೆದಿದ್ದರು. ಈ ವೇಳೆ 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ಕೂಡ ಅವರು ಉಲ್ಲೇಖ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ:'ಇಂದಿರಾಗಾಂಧಿ ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಬಡಿದು ಹಾಕಿದರು': ಕಂಗನಾ ವಿರುದ್ಧ ದೂರು ದಾಖಲು
ಇದಕ್ಕೆ ಸಂಬಂಧಿಸಿದಂತೆ ಗುರುದ್ವಾರ ಮ್ಯಾನೇಜ್ಮೆಂಟ್ ಮಂಡಳಿ ಸದಸ್ಯ ಹಾಗೂ ಉದ್ಯಮಿ ಅಮರ್ಜೀತ್ ಸಿಂಗ್ ಪ್ರಕರಣ ದಾಖಲು ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ. ಸಿಖ್ ಸಮುದಾಯದ ವಿರುದ್ಧ ವಿವಾದಿತ ಹೇಳಿಕೆ ನೀಡುತ್ತಿದ್ದಂತೆ ಕಂಗನಾ ಅವರ ಮುಂಬೈ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ದೂರು ದಾಖಲಾಗಿದೆ.