ಮಧುರೈ: ಹಿಂದೂಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಎಂಎನ್ಎಂ ಮುಖ್ಯಸ್ಥ ಕಮಲ್ ಹಾಸನ್ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಕೋರ್ಟ್ ರದ್ದುಗೊಳಿಸಿದೆ.
ತಮಿಳು ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಹಿಂದೂಗಳ ಪವಿತ್ರ ಗ್ರಂಥ ಮಹಾಭಾರತವನ್ನು ಅವಮಾನಿಸಿದ್ದಾರೆ. ಹಾಗಾಗಿ, ಕಮಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ 2017 ರಲ್ಲಿ ತಿರುನೆಲ್ವೇಲಿಯ ಆದಿನಾಥ ಸುಂದರಂ ಎಂಬುವರು ದೂರು ದಾಖಲಿಸಿದ್ದರು.
ಈ ಸಂಬಂಧ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠಕ್ಕೆ ಅರ್ಜಿ ಸಲ್ಲಿಸಿದ್ದ ಕಮಲ್ ಹಾಸನ್, ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು ಮತ್ತು ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಬೇಕೆಂದು ಕೋರಿದ್ದರು.
ಓದಿ : ಮಾವೋವಾದಿಗಳೊಂದಿಗೆ ನಂಟು ಆರೋಪ.. ಏಳು ಮಂದಿ ವಿರುದ್ಧ ಎನ್ಐಎ ಚಾರ್ಜ್ ಶೀಟ್
ಕಮಲ್ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ, ಕಮಲ್ ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು. ಇದಾದ ಬಳಿಕ, 21 ಮೇ 2021 ರಂದು ನ್ಯಾಯಮೂರ್ತಿಗಳಾದ ಜಿ. ಇಲಂಗೋವನ್ ನೇತೃತ್ವದ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಕಮಲ್ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಿದ್ದಾರೆ. ವಲಿಯೂರು ನ್ಯಾಯಾಲಯದಲ್ಲಿ ಕಮಲ್ ವಿರುದ್ಧ ಮಾನಹಾನಿ ಪ್ರಕರಣ ಕೂಡ ದಾಖಲಾಗಿತ್ತು. ಅದನ್ನೂ ಕೋರ್ಟ್ ವಜಾಗೊಳಿಸಿದೆ.