ಚೆನ್ನೈ (ತಮಿಳುನಾಡು):ಚೆನ್ನೈನ ಕಲಾಕ್ಷೇತ್ರದ ರುಕ್ಮಿಣಿ ದೇವಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಪ್ರಾಧ್ಯಾಪಕನನ್ನು ಚೆನ್ನೈ ಪೊಲೀಸರು ಇಂದು ಬಂಧಿಸಿದ್ದಾರೆ. ಡ್ಯಾನ್ಸ್ ಪ್ರೊಫೆಸರ್ ಹರಿ ಪದ್ಮನ್ ವಿರುದ್ಧ ಮಾಜಿ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಮೇರೆಗೆ ಅಡ್ಯಾರ್ ಪೊಲೀಸರು ಮಾರ್ಚ್ 31 ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸ್ ಅಧಿಕಾರಿಗಳ ಪ್ರಕಾರ, ಹಳೆ ವಿದ್ಯಾರ್ಥಿನಿಯೊಬ್ಬರು ಶುಕ್ರವಾರ ಹರಿ ಪದ್ಮನ್ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಆರೋಪಿ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಮಹಿಳಾ ಕಿರುಕುಳ ಕಾಯ್ದೆಯ ಸೆಕ್ಷನ್ 354 (ಎ), 509, 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಲಾಕ್ಷೇತ್ರ ಫೌಂಡೇಶನ್‌ನ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ ಕೆಲವು ದಿನಗಳ ನಂತರ ಈ ವಿಷಯ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಕಲಾಕ್ಷೇತ್ರದ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸಿತ್ತು. ಪ್ರಾಧ್ಯಾಪಕನ ಬಂಧನದಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಹಿಂಪಡೆದಿರುವುದಾಗಿ ಹೇಳುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ, ತಮಿಳುನಾಡು ಮಹಿಳಾ ಆಯೋಗದ ಅಧ್ಯಕ್ಷರು, ಮಾಧ್ಯಮ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಇತರ ಅಧಿಕೃತ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಸಂಸ್ಥೆಯ ವಿದ್ಯಾರ್ಥಿ ಸಂಘವು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಪತ್ರ ಬರೆದು ಸಂಸ್ಥೆಯ ನಿರ್ದೇಶಕರು ಮತ್ತು ನೃತ್ಯ ವಿಭಾಗದ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.