ಕರ್ನಾಟಕ

karnataka

ETV Bharat / bharat

ವಿದ್ಯುತ್ ಉತ್ಪಾದನೆ ಆರಂಭಿಸಿದ ಕಕ್ರಾಪರ್​ನ 4ನೇ ಪರಮಾಣು ವಿದ್ಯುತ್ ಘಟಕ - ಹೆವಿ ವಾಟರ್ ರಿಯಾಕ್ಟರ್​

ಗುಜರಾತಿನ ಕಕ್ರಾಪರ್ ಅಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿನ (ಕೆಎಪಿಪಿ) 700 ಮೆಗಾವ್ಯಾಟ್ ಘಟಕ ವಿದ್ಯುತ್ ಉತ್ಪಾದನೆಯ ನಿರ್ಣಾಯಕ ಹಂತ ತಲುಪಿದೆ ಎಂದು ಎನ್​ಪಿಸಿಐಎಲ್ ತಿಳಿಸಿದೆ.

kakrapars-4th-nuclear-power-plant-begins-power-generation
kakrapars-4th-nuclear-power-plant-begins-power-generation

By ETV Bharat Karnataka Team

Published : Dec 17, 2023, 7:11 PM IST

ನವದೆಹಲಿ: ಭಾರತದ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ವಹಿಸುವ ಸಂಸ್ಥೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್​ಪಿಸಿಐಎಲ್) ಗುಜರಾತಿನ ಕಕ್ರಾಪರ್ ಅಣು ವಿದ್ಯುತ್ ಸ್ಥಾವರ ಯೋಜನೆ (ಕೆಎಪಿಪಿ) ಯಲ್ಲಿನ ತನ್ನ ಎರಡನೇ 700 ಮೆಗಾವ್ಯಾಟ್ ಘಟಕವು ಭಾನುವಾರ ಮುಂಜಾನೆ 1.17ಕ್ಕೆ ವಿದ್ಯುತ್ ಉತ್ಪಾದನೆಯ ನಿರ್ಣಾಯಕ ಹಂತವನ್ನು ತಲುಪಿದೆ ಎಂದು ತಿಳಿಸಿದೆ. ಇದು ಕಕ್ರಾಪರ್‌ನಲ್ಲಿ ಎನ್​ಪಿಸಿಐಎಲ್‌ನ ನಾಲ್ಕನೇ ಪರಮಾಣು ವಿದ್ಯುತ್ ಘಟಕವಾಗಿದೆ.

ಎನ್​ಪಿಸಿಐಎಲ್ ಕಕ್ರಾಪರ್​ನಲ್ಲಿ ಎರಡು 220 ಮೆಗಾವ್ಯಾಟ್ ಮತ್ತು ಒಂದು 700 ಮೆಗಾವ್ಯಾಟ್ ಪರಮಾಣು ವಿದ್ಯುತ್ ಸ್ಥಾವರಗಳನ್ನು ಈಗಾಗಲೇ ಕಾರ್ಯಾಚರಣೆಗೊಳಿಸಿದೆ. ಮೊದಲ 700 ಮೆಗಾವ್ಯಾಟ್ ಸಾಮರ್ಥ್ಯದ ಘಟಕವು ಆಗಸ್ಟ್ 30, 2023 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಕಕ್ರಾಪರ್ನಲ್ಲಿರುವ ಎರಡು ಘಟಕಗಳು ಎನ್​ಪಿಸಿಐಎಲ್​ ದೇಶೀಯವಾಗಿ ವಿನ್ಯಾಸಗೊಳಿಸಿ ಸ್ಥಾಪಿಸಲಾದ 16 ಹೆವಿ ವಾಟರ್ ರಿಯಾಕ್ಟರ್​ಗಳ (pressurized heavy water reactors -PHWR) ಭಾಗವಾಗಿವೆ.

"ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ (ಎಇಆರ್​ಬಿ) ಯ ಎಲ್ಲಾ ನಿಬಂಧನೆಗಳನ್ನು ಪಾಲಿಸಿದ ನಂತರ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಸ್ಥಾವರ ವ್ಯವಸ್ಥೆಗಳ ಸುರಕ್ಷತೆಯ ಸಂಪೂರ್ಣ ಪರಿಶೀಲನೆಯ ನಂತರ ಎಇಆರ್​ಬಿ ಇದರ ಕಾರ್ಯಾರಂಭಕ್ಕೆ ಅನುಮತಿ ನೀಡಿದೆ." ಎಂದು ಎನ್​ಪಿಸಿಐಎಲ್ ಹೇಳಿದೆ.

ಕೆಎಪಿಪಿ -3 ರ ಸುಗಮ ಕಾರ್ಯಾಚರಣೆಯೊಂದಿಗೆ ಪರಮಾಣು ಶಕ್ತಿಯ ಎಲ್ಲಾ ಮಾದರಿಗಳಲ್ಲಿ ಅಂದರೆ ವಿನ್ಯಾಸ, ನಿರ್ಮಾಣ, ಕಾರ್ಯಾರಂಭ ಮತ್ತು ಕಾರ್ಯಾಚರಣೆಯಲ್ಲಿ ಎನ್​ಪಿಸಿಐಎಲ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಮೊದಲ ನಿರ್ಣಾಯಕ ಹಂತದ ನಂತರ ಕೆಎಪಿಪಿ -4 ರಲ್ಲಿ ಹಲವಾರು ಪ್ರಯೋಗ ಮತ್ತು ಪರೀಕ್ಷೆಗಳನ್ನು ನಡೆಸಲಾಗುವುದು. ನಂತರ ಎಇಆರ್​ಬಿಯ ನಿಬಂಧನೆಗಳಿಗೆ ಅನುಗುಣವಾಗಿ ವಿದ್ಯುತ್ ಮಟ್ಟವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ. ಅಂತಿಮವಾಗಿ ಘಟಕ ತನ್ನ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಆರಂಭಿಸುತ್ತದೆ.

ಎನ್​ಪಿಸಿಐಎಲ್ ಪ್ರಸ್ತುತ ಒಟ್ಟು 7,480 ಮೆಗಾವ್ಯಾಟ್ ಸಾಮರ್ಥ್ಯದ 23 ರಿಯಾಕ್ಟರ್​ಗಳನ್ನು ನಿರ್ವಹಿಸುತ್ತಿದೆ ಮತ್ತು 7,500 ಮೆಗಾವ್ಯಾಟ್ ಸಾಮರ್ಥ್ಯದ ಒಂಬತ್ತು ಘಟಕಗಳು (ಕೆಎಪಿಪಿ -4 ಸೇರಿದಂತೆ) ನಿರ್ಮಾಣ ಹಂತದಲ್ಲಿದೆ. ಇದಲ್ಲದೆ, ಒಟ್ಟು 7,000 ಮೆಗಾವ್ಯಾಟ್ ಸಾಮರ್ಥ್ಯದ ಇನ್ನೂ 10 ರಿಯಾಕ್ಟರ್ ಗಳು ಯೋಜನಾ ಪೂರ್ವ ಹಂತದಲ್ಲಿವೆ. ಇವು 2031-32ರ ವೇಳೆಗೆ ಹಂತ ಹಂತವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎನ್​ಪಿಸಿಐಎಲ್ ತಿಳಿಸಿದೆ.

ಇದನ್ನೂ ಓದಿ:GenAIನಿಂದ 2030ರ ವೇಳೆಗೆ ಭಾರತದ ಜಿಡಿಪಿಗೆ 1.5 ಟ್ರಿಲಿಯನ್ ಡಾಲರ್ ಆದಾಯ: ವರದಿ

ABOUT THE AUTHOR

...view details