ನವದೆಹಲಿ: ಮಕ್ಕಳಿಗಾಗಿ ಆರೋಗ್ಯಕರ ಹಾಗೂ ಉತ್ತಮ ಬಾಲ್ಯಾವಸ್ಥೆ ನೀಡುವುದಕ್ಕಾಗಿ ಸದಾ ಹೋರಾಟ ಮಾಡುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ತಮ್ಮ ಕಾರ್ಯಗಳಿಂದ ಹೆಸರಾಗಿದ್ದಾರೆ. ಸುಮಾರು 90 ಸಾವಿರ ಮಕ್ಕಳನ್ನು ಜೀತದಿಂದ ವಿಮುಕ್ತಿಗೊಳಿಸಿದ ಖ್ಯಾತಿ ಇವರದ್ದಾಗಿದೆ. ಭಾರತದಲ್ಲಿಯೇ ಹುಟ್ಟಿ, ಭಾರತವನ್ನೇ ಕರ್ಮಭೂಮಿಯನ್ನಾಗಿಸಿಕೊಂಡು ನೊಬೆಲ್ ಪಡೆದ ಪ್ರಥಮ ಭಾರತೀಯ ಇವರಾಗಿದ್ದಾರೆ. 2015ರಲ್ಲಿ ಜಾಗತಿಕ ಅತ್ಯುನ್ನತ ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದ ಇವರು, 2025ರ ಹೊತ್ತಿಗೆ ಈ ಜಗತ್ತನ್ನು ಬಾಲಕಾರ್ಮಿಕ ಪದ್ಧತಿ ಮುಕ್ತಗೊಳಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಕೈಲಾಶ್ ಪ್ರಮುಖ ಭಾಷಣಕಾರರಾಗಿದ್ದರು. ಜಗತ್ತಿನಿಂದ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂದು ಅವರು ವಿಶ್ವಸಂಸ್ಥೆಯಲ್ಲಿ ಜಗತ್ತಿನ ಇತರೆ ರಾಷ್ಟ್ರಗಳಿಗೆ ಹಕ್ಕೊತ್ತಾಯ ಮಾಡಿದ್ದು ಗಮನಾರ್ಹ. ಕೈಲಾಶ್ ಸತ್ಯಾರ್ಥಿ ತಮ್ಮ ವಿಚಾರಗಳನ್ನು 'ಈಟಿವಿ ಭಾರತ' ದೊಂದಿಗೆ ಹಂಚಿಕೊಂಡಿದ್ದಾರೆ.
ಈಟಿವಿ ಭಾರತ: ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ತಾವು ಪ್ರಮುಖ ಭಾಷಣಕಾರರಾಗಿದ್ದಿರಿ. ಆ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗಾಗಿ ತಾವು ಹಂಚಿಕೊಂಡ ವಿಚಾರಗಳೇನು?
ಕೈಲಾಶ್ ಸತ್ಯಾರ್ಥಿ: ಒಬ್ಬ ಭಾರತೀಯನಾಗಿ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆಯಿದೆ. ಸಾಮಾನ್ಯವಾಗಿ ದೇಶದ ಅಧ್ಯಕ್ಷರು ಅಥವಾ ಪ್ರಧಾನ ಮಂತ್ರಿಗಳಿಗೆ ಸಿಗುವ ಸ್ಥಾನವನ್ನು ನನಗೆ ನೀಡಲಾಗಿದ್ದು ಇನ್ನೂ ಹೆಮ್ಮೆಯ ವಿಷಯ. ಜಗತ್ತಿನಲ್ಲಿ ಅತಿ ಹೆಚ್ಚು ಸಂಕಷ್ಟದಲ್ಲಿರುವ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳ ಆರ್ತನಾದವನ್ನು ಜಗತ್ತು ಈ ಸಂದರ್ಭದಲ್ಲಿ ಕೇಳಲು ಬಯಸುತ್ತದೆ ಎಂದು ಭಾವಿಸಿದ್ದೇನೆ. ಆ ಮಕ್ಕಳ ಧ್ವನಿಯು ನನ್ನ ಮೂಲಕ ಜಗತ್ತಿಗೆ ತಲುಪುವಂತಾಗಲಿ. ಈಗಾಗಲೇ ಕೋಟ್ಯಂತರ ಮಕ್ಕಳು ಶಿಕ್ಷಣ ವಂಚಿತರಾಗಿದ್ದು, ಇವರಾರೂ ಶಾಲೆಗಳಿಗೆ ಹೋಗಲಾಗುತ್ತಿಲ್ಲ. ಲಕ್ಷಾಂತರ ಮಕ್ಕಳು ಈಗಲೂ ಶಾಲೆಯಿಂದ ಹೊರಗುಳಿದಿದ್ದಾರೆ.
ಹೀಗೆ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಬಲವಂತವಾಗಿ ಬಾಲಕಾರ್ಮಿಕರನ್ನಾಗಿ ಮಾಡಲಾಗುತ್ತದೆ. ಈ ಮಕ್ಕಳು ಲೈಂಗಿಕ ಶೋಷಣೆಗೂ ಒಳಗಾಗುತ್ತಾರೆ. ಹೀಗಾಗಿ ಇಂಥ ಕೆಲವೇ ಮಕ್ಕಳು ಸಮಸ್ಯೆಯಲ್ಲಿದ್ದಾರೆ ಎಂದುಕೊಳ್ಳುವಂತಿಲ್ಲ. ಹೀಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳು ಒಟ್ಟಾಗಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕಿದೆ.
ಈಟಿವಿ ಭಾರತ:ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಭಾರತ ಸೇರಿದಂತೆ ವಿಶ್ವಾದ್ಯಂತದ ಮಕ್ಕಳು ಪ್ರಭಾವಿತರಾಗಿದ್ದಾರೆ. ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲೇ ಎಲ್ಲ ಗಮನ ಕೇಂದ್ರೀಕರಿಸಿದ್ದು, ಮಕ್ಕಳಿಗಾಗಿ ವಿಶೇಷ ಕಾಳಜಿ ಎಲ್ಲೂ ಕಂಡು ಬರುತ್ತಿಲ್ಲ. ಇದಕ್ಕೆ ಪರಿಹಾರವೇನು?