ಮುಂಬೈ:ತೆಲಂಗಾಣ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷವನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ. ತೆಲಂಗಾಣಕ್ಕೆ ಹೊಂದಿಕೊಂಡಿರುವ ನಾಂದೇಡ್ನಿಂದ ತಮ್ಮ ಪಕ್ಷವನ್ನು ಆರಂಭಿಸಿ ಮರಾಠವಾಡದ ಮೇಲೆ ಪ್ರಭಾವ ಬೀರಲು ತಂತ್ರ ಹೂಡಿದ್ದಾರೆ. ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ವಿರೋಧ ಪಕ್ಷದ ವ್ಯಾಪ್ತಿಯನ್ನು ಪರಿಗಣಿಸಿ, ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಸಂಗಡಿಗರು ಮಹಾರಾಷ್ಟ್ರದಲ್ಲಿ ಬಿಆರ್ಎಸ್ ಪಕ್ಷವನ್ನು ಬೇರೂರಿಸಲು ಪ್ರಯತ್ನಿಸುತ್ತಿದ್ದಾರೆ.
ಬಿಆರ್ಎಸ್ ದೃಷ್ಟಿ ಮರಾಠವಾಡದ ಮೇಲೇಕೆ ಕೆಸಿಆರ್ ಕಣ್ಣು?: ಮುಂಬೈ, ಪುಣೆ, ನಾಸಿಕ್ ನಂತಹ ದೊಡ್ಡ ನಗರಗಳನ್ನು ಬಿಟ್ಟು ಬಿಆರ್ ಎಸ್ ಪಕ್ಷ ಮರಾಠವಾಡಕ್ಕೆ ಲಗ್ಗೆಯಿಡಲು ಯತ್ನಿಸುತ್ತಿದೆ. ಹಾಗಾದರೆ ಅವರು ಈ ಭಾಗವನ್ನು ಆರಿಸಿಕೊಳ್ಳಲು ಕಾರಣ ಏನಾಗಿರಬಹುದು ಎಂಬ ಬಗ್ಗೆ ಎಲ್ಲಾ ಕಡೆ ಚರ್ಚೆ ಆರಂಭವಾಗಿದೆ. ಆದರೆ, ಈ ಬಗ್ಗೆ ಬಿಆರ್ಎಸ್ ಪಕ್ಷದ ಶಾಸಕ ಜೀವನ್ ರೆಡ್ಡಿ ಕೆಲವು ಅಂಶಗಳನ್ನು ವಿವರಿಸಿದ್ದಾರೆ. ತೆಲಂಗಾಣಕ್ಕೆ ಹತ್ತಿರವಾಗಿ ಮರಾಠವಾಡದ ನಾಂದೇಡ್ ಜಿಲ್ಲೆ ಇದ್ದು, ಇಲ್ಲಿನ ಜನರು ತೆಲಂಗಾಣದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುತ್ತಿದ್ದಾರೆ. ಮತ್ತು ನಾಂದೇಡ್ ಪ್ರದೇಶದ ನಾಗರಿಕರು ರೈತರು ಮತ್ತು ಸಾಮಾನ್ಯ ಜನ ನಮ್ಮ ಕಾರ್ಯಗಳಿಗೆ ಸ್ಪಂದಿಸುತ್ತಿದ್ದಾರೆ.
ಹಾಗಾಗಿ ಮೊದಲಿಗೆ ನಾಂದೇಡ್ನಲ್ಲಿ ಸಾರ್ವಜನಿಕ ಸಭೆ ಕೂಡ ನಡೆಸಲಾಯಿತು. ಮರಾಠವಾಡದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಬಲ ಬರುವುದರಲ್ಲಿ ಸಂಶಯವಿಲ್ಲ. ಅಷ್ಟೇ ಅಲ್ಲ, ಮರಾಠವಾಡದಲ್ಲಿ ರೈತರು ಎದುರಿಸುತ್ತಿದ್ದ ಸಮಸ್ಯೆಗಳು ಒಂದು ಕಾಲದಲ್ಲಿ ತೆಲಂಗಾಣದ ರೈತರ ಸಮಸ್ಯೆಗಳಾಗಿದ್ದವು. ಹಾಗಾಗಿ ತೆಲಂಗಾಣದ ರೈತರಿಗೆ ಸಿಗುವ ಸೌಲಭ್ಯಗಳನ್ನು ನಾವೂ ಪಡೆಯಬಹುದು ಎಂಬ ಭಾವನೆ ರೈತರಲ್ಲಿರುವುದರಿಂದ ಬಿಆರ್ ಎಸ್ ಗೆ ಇಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಬಹುದು.