ನವದೆಹಲಿ:ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ನೂತನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಜನರಿಗೆ ಶುಭ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ಕೇಂದ್ರದ ಉಡಾನ್ ಯೋಜನೆಯಡಿ ರಾಜ್ಯವು ಜುಲೈ 16 ರಿಂದ ಎಂಟು ಹೊಸ ವಿಮಾನಗಳನ್ನು ಹೊಂದಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಂಧಿಯಾ, ಜುಲೈ 16ರಿಂದ ಇಲ್ಲಿ 8 ಹೊಸ ವಿಮಾನಗಳು ಸಂಚರಿಸಲಿವೆ. ಸಣ್ಣ ವಿಮಾನ ನಿಲ್ದಾಣಗಳನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವತ್ತ ಗಮನಹರಿಸಲಾಗಿದೆ. ಹೊಸ ವಿಮಾನಗಳನ್ನು ಸ್ಪೈಸ್ ಜೆಟ್ ನಿರ್ವಹಿಸಲಿದೆ. ಗ್ವಾಲಿಯರ್-ಮುಂಬೈ-ಗ್ವಾಲಿಯರ್, ಗ್ವಾಲಿಯರ್-ಪುಣೆ-ಗ್ವಾಲಿಯರ್, ಜಬಲ್ಪುರ-ಸೂರತ್-ಜಬಲ್ಪುರ ಮತ್ತು ಅಹ್ಮದಾಬಾದ್-ಗ್ವಾಲಿಯರ್-ಅಹ್ಮದಾಬಾದ್ ವಿಮಾನಗಳು ಸಂಚಾರ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಾಯುಯಾನ ಉದ್ಯಮವು ಉಡಾನ್ ಯೋಜನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧವಾಗಿದೆ. ಸಣ್ಣ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವತ್ತ ಗಮನಹರಿಸಿರುವ ಈ ಯೋಜನೆಯಡಿ ಕನಿಷ್ಟ 1,000 ವಾಯು ಮಾರ್ಗಗಳನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ 33ನೇ ನಾಗರಿಕ ವಿಮಾನಯಾನ ಸಚಿವರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದರು. ಇವರ ತಂದೆ ಮಾಧವ್ ರಾವ್ ಸಿಂಧಿಯಾ ಅವರು 1990 ರ ದಶಕದ ಆರಂಭದಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರದಲ್ಲಿ ಇದೇ ಖಾತೆಯನ್ನು ನಿರ್ವಹಿಸಿದ್ದರು.
2017ರಲ್ಲಿ ಹರ್ದೀಪ್ ಸಿಂಗ್ ಪುರಿ ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ಉಡಾನ್ ಯೋಜನೆ ಪ್ರಾರಂಭವಾಗಿತ್ತು. ಉಡಾನ್ ಎಂಬುದು ಪ್ರಾದೇಶಿಕ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಪ್ರಾದೇಶಿಕ ಸಂಪರ್ಕ ಯೋಜನೆ. ಪ್ರಯಾಣಿಕರಿಗೆ ಅಗ್ಗದಲ್ಲಿ ವಿಮಾನಯಾನ ಸೇವೆ ಒದಗಿಸಲು ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಪ್ರಧಾನಿ ಮೋದಿ ಸರ್ಕಾರ ಇದನ್ನು ಜಾರಿಗೊಳಿಸಿದೆ.