ಪುಣೆ: ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರತ್ನಗಿರಿಯಲ್ಲಿ ನೀರಿನ ಹರಿವು ಅಪಾಯದ ಮಟ್ಟವನ್ನು ದಾಟಿದೆ. ಅಷ್ಟೇ ಅಲ್ಲದೆ, ಕೆಲ ಭಾಗಗಳು ಜಲಾವೃತವಾಗಿದೆ.
ಇನ್ನು ಪಶ್ಚಿಮ ಮಹಾರಾಷ್ಟ್ರದ ಸತಾರಾ ಮತ್ತು ಕೊಲ್ಹಾಪುರ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪುಣೆ ಜಿಲ್ಲೆಯ ಭೀಮಾಶಂಕರ್ ಮುಖ್ಯ ದೇವಾಲಯವು ಪ್ರವಾಹದ ನೀರಿನಿಂದ ಆವೃತವಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜ್ಯೋತಿರ್ಲಿಂಗ ಮುಳುಗಿದೆ ಎಂದು ಹೇಳಲಾಗಿದೆ.
ಪ್ರಥಮ ಬಾರಿ ಜಲಾವೃತವಾದ ಜ್ಯೋತಿರ್ಲಿಂಗ ನೀರಿನಿಂದ ಆವೃತವಾದ ಭೀಮಾಶಂಕರ್ ದೇವಸ್ಥಾನ:
ಕಳೆದ 24 ಗಂಟೆಗಳಿಂದ ಪುಣೆ, ಜುನ್ನಾರ್ ಮತ್ತು ಖೇಡ್‌ನಲ್ಲಿ ಭಾರಿ ಮಳೆಯಾಗುತ್ತಿದೆ. ಭೀಮಶಂಕರ್ ಪ್ರದೇಶದಲ್ಲೂ ಕಳೆದ ಹಲವು ಗಂಟೆಗಳ ಕಾಲ ಭಾರಿ ಮಳೆಯಾಗಿದೆ. ನಿನ್ನೆ ಮತ್ತು ಇಂದು ಭೀಮಾಶಂಕರ್ ಪ್ರದೇಶದಲ್ಲಿ ಉಂಟಾದ ಭಾರಿ ಮಳೆಯಿಂದಾಗಿ ದೇವಸ್ಥಾನಕ್ಕೆ ಪ್ರವಾಹದ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.
ದೇವಾಲಯದ ನವೀಕರಣ ಕಾರ್ಯಗಳು ನಡೆಯುತ್ತಿರುವುದೆ. ಹೀಗಾಗಿ ನೀರನ್ನು ಹೊರಹಾಕಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೆ ದೇವಾಲಯ ಬಂದ್ ಮಾಡಲಾಗಿದೆ.