ಕರ್ನಾಟಕ

karnataka

ETV Bharat / bharat

ಮಣಿಪುರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ: ಬಾಲಾಪರಾಧಿ ಸೇರಿ 6 ಮಂದಿ ಸೆರೆ, ವಲಸೆ ಹೋಗದಂತೆ ಸರ್ಕಾರದ ಮನವಿ

ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ಮಧ್ಯೆ ನಡೆಯುತ್ತಿರುವ ಸಂಘರ್ಷ ಈವರೆಗೆ 160ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಈಚೆಗೆ ಮಹಿಳೆಯರನ್ನು ವಿವಸ್ತ್ರಗೊಳಿಸಿದ ಅಮಾನವೀಯ ವಿಡಿಯೋ ಹೊರಬಿದ್ದಿದ್ದು, ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೇಸ್​ನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ.

ಮಣಿಪುರ ಮಹಿಳೆಯರ ಬೆತ್ತಲೆ ವಿಡಿಯೋ
ಮಣಿಪುರ ಮಹಿಳೆಯರ ಬೆತ್ತಲೆ ವಿಡಿಯೋ

By

Published : Jul 23, 2023, 12:43 PM IST

ಇಂಫಾಲ:ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ಎಳೆದೊಯ್ದು ಮೆರವಣಿಗೆ ಮಾಡಿದ ಅಮಾನವೀಯ ಪ್ರಕರಣವನ್ನು ಜಾಲಾಡುತ್ತಿರುವ ಪೊಲೀಸರು ಓರ್ವ ಬಾಲಾಪರಾಧಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಇದರಿಂದ ಕೇಸ್​ನಲ್ಲಿ ಈವರೆಗೂ 6 ಮಂದಿಯನ್ನು ಬಂಧಿಸಿದಂತಾಗಿದೆ.

ಮೇ 4ರಂದು ಕಾಂಗ್‌ಪೊಕ್ಸಿ ಜಿಲ್ಲೆಯ ಫೈನೋಮ್ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಕುಕಿ ಸಮುದಾಯದ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಜಮೀನಿನ ಕಡೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿತ್ತು. ಇದರ ವಿಡಿಯೋ ಹೊರಬಿದ್ದ ಬಳಿಕ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಪ್ರಕರಣ ದಾಖಲಿಸಿಕೊಂಡು ವಿಡಿಯೋದಲ್ಲಿ ಕಾಣಿಸಿಕೊಂಡವರ ಶೋಧ ನಡೆಸುತ್ತಿರುವ ಪೊಲೀಸರು, ವಿಡಿಯೋ ಹೊರಬಿದ್ದ ಮೊದಲ ದಿನವೇ ಪ್ರಮುಖ ಕೀಚಕನನ್ನು ಬಂಧಿಸಿದ್ದರು. ಇದಾದ ಬಳಿಕ ಮೂವರನ್ನು ಹೆಡೆಮುರಿ ಕಟ್ಟಲಾಗಿತ್ತು. ನಿನ್ನೆ ಮತ್ತೊಬ್ಬ ಸಿಕ್ಕಿಬಿದ್ದಿದ್ದಾನೆ. ವಿಡಿಯೋ ವೈರಲ್‌ ಆದ ಬಳಿಕ ಹಲವರು ಕಣ್ಮರೆಯಾಗಿದ್ದು, ಶಂಕಿತ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಸರ್ವಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಾಂಗೀಯ ಘರ್ಷಣೆಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಈಗ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ದಾಳಿಕೋರರನ್ನು ಸದೆಬಡಿಯಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಪೊಲೀಸ್​ ಕಸ್ಟಡಿಗೆ:ಬಂಧನಕ್ಕೊಳಗಾದ ಎಲ್ಲ 6 ಆರೋಪಿಗಳನ್ನು11 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿ ಅವರಿಂದ ಉಳಿದವರ ಪತ್ತೆಗಾಗಿ ಬಲೆ ಬೀಸಲಾಗುವುದು ಎಂದು ತಿಳಿದುಬಂದಿದೆ.

ಬೆತ್ತಲೆಗೊಳಿಸಿ ಅವಮಾನಕ್ಕೊಳಗಾದ ಇಬ್ಬರಲ್ಲಿ ಓರ್ವ ಮಹಿಳೆ ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ಮಾಜಿ ಯೋಧನ ಪತ್ನಿ. ಅಸ್ಸಾಂ ರೆಜಿಮೆಂಟ್‌ನಲ್ಲಿ ಸುಬೇದಾರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು. ದೇಶವನ್ನೇ ಕಾಪಾಡಲು ಹೋರಾಡಿದ ನಾನು, ಪತ್ನಿಗೆ ರಕ್ಷಣೆ ನೀಡಲಾಗಲಿಲ್ಲ ಎಂದು ಮಾಜಿ ಯೋಧ ತೀವ್ರ ನೊಂದು ನುಡಿದಿದ್ದರು.

ಮಹಿಳೆಯರನ್ನು ಅಪಹರಿಸಿ, ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವುದಕ್ಕೂ ಮೊದಲು ಓರ್ವನನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೇ ಇನ್ನೊಬ್ಬಾಕೆಯ ಮೇಲೂ ಅತ್ಯಾಚಾರ ನಡೆಸಲಾಗಿದೆ ಎಂದು ಈ ಬಗ್ಗೆ ದಾಖಲಾದ ದೂರಿನಲ್ಲಿ ಉಲ್ಲೇಖವಾಗಿದೆ.

ರಾಜ್ಯದಲ್ಲಿ ಮೇ 3ರಿಂದ ನಡೆಯುತ್ತಿರುವ ಜನಾಂಗೀಯ ಕಲಹದಲ್ಲಿ ಈವರೆಗೂ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಬುಡಕಟ್ಟು ಸಮುದಾಯವಾದ ಮೈತೇಯಿಗೆ ಎಸ್​ಟಿ ಮೀಸಲಾಯಿತಿ ನೀಡಬೇಕು ಎಂಬ ಹೋರಾಟವೇ ಈ ಸಂಘರ್ಷಕ್ಕೆ ಕಾರಣವಾಗಿದೆ.

ರಾಜ್ಯ ತೊರೆಯದಂತೆ ಮನವಿ:ಕುಕಿಗಳ ದಾಳಿಗೆ ಒಳಗಾಗಿರುವ ಮೈತೇಯಿ ಸಮುದಾಯದ ಜನರು ರಾಜ್ಯ ತೊರೆಯುತ್ತಿದ್ದು, ಇಲ್ಲಿಯೇ ಉಳಿದುಕೊಳ್ಳಲು ಸರ್ಕಾರ ಮನವಿ ಮಾಡಿದೆ. ಶಾಂತಿ ನೆಲೆಸುವಂತೆ ಕ್ರಮ ಕೈಗೊಳ್ಳಲಾಗುವುದು, ಭದ್ರತೆ ನೀಡಲಾಗುವುದು. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಧೈರ್ಯ ತುಂಬುತ್ತಿದೆ. ಮಣಿಪುರದಲ್ಲಿ ನಡೆಯುತ್ತಿರುವ ಕಲಹದಿಂದಾಗಿ ಭಯಗೊಂಡಿರುವ ಸಮುದಾಯದ ಜನರು ದಕ್ಷಿಣ ಅಸ್ಸಾಂ, ಮಿಜೋರಾಂನತ್ತ ವಲಸೆ ಹೋಗುತ್ತಿದ್ದಾರೆ.

ಇದನ್ನೂ ಓದಿ:ಮಣಿಪುರ ಬಳಿಕ ಪಶ್ಚಿಮಬಂಗಾಳದಲ್ಲಿ ಸಾರ್ವಜನಿಕವಾಗಿ ಮಹಿಳೆಯರ ವಿವಸ್ತ್ರಗೊಳಿಸಿ ಅಮಾನುಷ ಹಲ್ಲೆ

ABOUT THE AUTHOR

...view details