ಜಡ್ಜ್ ಕಾರನ್ನೇ ಜಖಂಗೊಳಿಸಿದ ಮಂಗಳೂರಿನಲ್ಲಿ ನೆಲಸಿರುವ ಮಾಜಿ ಸೈನಿಕ ಪತ್ತನಂತಿಟ್ಟ, ಕೇರಳ:ಜಿಲ್ಲೆಯಲ್ಲಿ ಬಂದಿದೆ. ವಿಚ್ಛೇದನ ಪ್ರಕರಣದಲ್ಲಿ ನ್ಯಾಯ ವಿಳಂಬವಾಗುತ್ತಿದೆ ಎಂದು ಮಾಜಿ ಸೈನಿಕರೊಬ್ಬರು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಕಾರನ್ನೇ ಜಖಂಗೊಳಿಸಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಈ ಘಟನೆ ಬುಧವಾರ ಸಂಜೆ 4 ಗಂಟೆಗೆ ಜಿಲ್ಲೆಯ ತಿರುವಲ್ಲಾದಲ್ಲಿ ನಡೆದಿದೆ.
ಹೌದು, ವಿಚ್ಛೇದನ ಪ್ರಕರಣದಲ್ಲಿ ನ್ಯಾಯದಾನ ವಿಳಂಬವಾಗಿದೆ ಎಂದು ಆರೋಪಿಸಿ ಮಾಜಿ ಸೈನಿಕರೊಬ್ಬರು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಕಾರನ್ನು ಧ್ವಂಸಗೊಳಿಸಿದ್ದಾರೆ. ತಿರುವಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿಆರ್ ಬಿಲ್ಕುಲ್ ಅವರ ಸ್ವಂತ ಕಾರು ಧ್ವಂಸಗೊಂಡಿರುವುದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಂಗಳಾಪುರಂ ಶಿವಗಿರಿನಗರದ ಅತುಲ್ಯ ಸಾಗರ ನಿವಾಸಿ ಇ.ಪಿ.ಜಯಪ್ರಕಾಶ್ (53) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಜಯಪ್ರಕಾಶ್ ಅವರು ವಿಚ್ಛೇದನ ಮತ್ತು ವರದಕ್ಷಿಣೆಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಘಟನೆಯ ವಿವರ:ಕೇರಳದ ಮಂಗಳಾಪುರಂ ಶಿವಗಿರಿ ನಿವಾಸಿ ಜಯಪ್ರಕಾಶ್ ಹಲವು ವರ್ಷಗಳ ಹಿಂದೆ ಪತ್ತನಂತಿಟ್ಟ ನಿವಾಸಿಯ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ಕೆಲ ವರ್ಷಗಳ ಹಿಂದೆ ಇವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಅದರಂತೆ ಇವರಿಬ್ಬರು ವಿಚ್ಛೇದನ ತೆಗೆದುಕೊಳ್ಳಲು ಇಷ್ಟಪಟ್ಟಿದ್ದರು. ಈ ಹಿನ್ನೆಲೆ ಮಾಜಿ ಸೈನಿಕನ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ಮತ್ತು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಇವರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ಪತ್ನಿಯೊಂದಿಗೆ ದೂರವಿರುವ ಜಯಪ್ರಕಾಶ್ ಸದ್ಯ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪ್ರಕಾಶ್ ಮಂಗಳೂರಿನಿಂದ ಪತ್ತನಂತಿಟ್ಟಕ್ಕೆ ಬರಬೇಕಾದ ಸ್ಥಿತಿ ಒದಗಿದೆ. ಹೆಚ್ಚಾಗಿ ಪ್ರಕರಣದ ಸಮಯ ಸಂಜೆ ಇರುತ್ತಿದ್ದು, ಅಥವಾ ಈ ಪ್ರಕರಣವನ್ನು ಮತ್ತೊಂದು ದಿನಕ್ಕೆ ಮುಂದೂಡಲಾಗುತ್ತಿತ್ತು. ಅದೇ ರೀತಿ ಬುಧವಾರವೂ ಪ್ರಕರಣ ಸಂಬಂಧ ಜಯಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆಗ ಸಹ ಇವರ ಪ್ರಕರಣ ಮುಂದೂಡಲಾಗಿತ್ತು. ಇದು ಜಯಪ್ರಕಾಶ್ಗೆ ಮಾನಸಿಕವಾಗಿ ಕಿರಿಕಿರಿ ಉಂಟುಮಾಡುತ್ತಿತ್ತು.
ಇದರಿಂದ ಕೋಪಗೊಂಡು ನ್ಯಾಯಾಲಯದಿಂದ ಹೊರಬಂದ ಜಯಪ್ರಕಾಶ್ ಅಂಗಡಿಯಿಂದ ಸಲಾಕೆಯೊಂದನ್ನು ಖರೀದಿಸಿದ್ದಾರೆ. ಬಳಿಕ ನೇರವಾಗಿ ಕೋರ್ಟ್ ಆವರಣಕ್ಕೆ ಬಂದ ಅವರು, ಸ್ಥಳದಲ್ಲಿದ್ದ ಜಡ್ಜ್ ಕಾರಿನ ಗಾಜು ಒಡೆದಿದ್ದಾರೆ. ಅಲ್ಲದೇ ಕಾರಿನ ಮುಂಭಾಗ ಹಾಗೂ ಹಿಂಬದಿಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಘಟನೆ ಬಳಿಕ ಜಯಪ್ರಕಾಶ್ ಕಾರಿನ ಬಳಿಯೇ ನಿಂತಿದ್ದು, ಅವರು ಆ ಸ್ಥಳದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಸಹ ಮಾಡಲಿಲ್ಲ. ನಂತರ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಜಯಪ್ರಕಾಶನನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಂಡರು.
ವಿಚ್ಛೇದನಾ ಪ್ರಕರಣ ವಿಳಂಬ ಹಿನ್ನೆಲೆ ದಾಳಿ: ಪ್ರಕರಣದ ವಿಳಂಬ ವಿರುದ್ಧ ಪ್ರತಿಭಟಿಸುವುದು ದಾಳಿಕೋರನ ಉದ್ದೇಶವಾಗಿತ್ತು. ಸಾರ್ವಜನಿಕ ಆಸ್ತಿ ನಾಶ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮರ್ಚೆಂಟ್ ನೇವಿಯಲ್ಲಿದ್ದ ಜಯಪ್ರಕಾಶ್ ಅವರು 2017ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಅವರ ಪತ್ನಿ ಪತ್ತನಂತಿಟ್ಟ ನ್ಯಾಯಾಲಯದಲ್ಲಿ ಮೊದಲು ದೂರು ದಾಖಲಿಸಿದ್ದರು. ಪ್ರಕರಣವನ್ನು ಜನವರಿಯಲ್ಲಿ ತಿರುವಲ್ಲಾ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈಗ ಈ ದಂಪತಿಯ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಓದಿ:ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ.. 10 ಮಂದಿ ಸಾವು, ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ