ಪಾಟ್ನಾ(ಬಿಹಾರ):ಬರೋಬ್ಬರಿ 108 ವರ್ಷಗಳ ಹಿಂದೆ ಕೋರ್ಟ್ನಲ್ಲಿ ದಾಖಲಾಗಿದ್ದ ಭೂ ವಿವಾದ ಪ್ರಕರಣಕ್ಕೆ ಬಿಹಾರದ ಅರ್ರಾ ಸಿವಿಲ್ ಕೋರ್ಟ್ ಇದೀಗ ತೀರ್ಪು ನೀಡಿದೆ. ಈ ಮೂಲಕ ನಾಲ್ಕನೇ ತಲೆಮಾರಿನ ಜನರಿಗೆ ಇದರಿಂದ ನ್ಯಾಯ ಸಿಕ್ಕಿದೆ. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ದಾಖಲಾಗಿದ್ದ ಆಸ್ತಿ ಸಂಬಂಧದ ವಿವಾದಕ್ಕೆ ಕೊನೆಗೂ ನ್ಯಾಯ ಸಿಕ್ಕಿರುವುದು ಮಾತ್ರ ಸಮಾಧಾನ ನೀಡುವ ವಿಚಾರವಾಗಿದೆ.
ಏನಿದು ಪ್ರಕರಣ?: 1911ರಲ್ಲಿ 9 ಎಕರೆ ಜಮೀನು ಹೊಂದಿದ್ದ ಕೊಯಿಲ್ವಾರ್ ನಿವಾಸಿ ನಾಥುನಿ ಖಾನ್ ನಿಧನರಾಗುತ್ತಾರೆ. ಈ ವೇಳೆ ಆಸ್ತಿ ಹಂಚಿಕೆ ವಿಚಾರವಾಗಿ ಪತ್ನಿ ಜೈತುನ್, ಸಹೋದರಿ ಬೀಬಿ ಬದ್ಲಾನ್ ಹಾಗೂ ಪುತ್ರಿ ಬೀಬಿ ಸಲ್ಮಾ ನಡುವೆ ಜಗಳವಾಗುತ್ತದೆ. ಈ ಪ್ರಕರಣ 1914ರಲ್ಲಿ ಕೋರ್ಟ್ ಮೆಟ್ಟಿಲೇರುತ್ತದೆ.
1931ರ ಫೆಬ್ರವರಿ ತಿಂಗಳಲ್ಲಿ ಕೋರ್ಟ್ ಮ್ಯಾಜಿಸ್ಟ್ರೇಟ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡುತ್ತಾರೆ. ಇದನ್ನ ಪ್ರಶ್ನೆ ಮಾಡಿ ಕುಟುಂಬ ಮೇಲ್ಮನವಿ ಸಲ್ಲಿಕೆ ಮಾಡಿತು. ಇದರ ಮಧ್ಯೆ ಕೊಯಿಲ್ವಾರ್ ನಿವಾಸಿ ಅಜರ್ ಖಾನ್(ದಿವಂಗತ) ಮೂರು ಎಕರೆ ಜಮೀನು ಕುಟುಂಬಸ್ಥರಿಂದ ಖರೀದಿ ಮಾಡಿದ್ದಾರೆ. ಇದಕ್ಕೂ ಸಂಬಂಧಿಸಿದಂತೆ 1927ರಲ್ಲೂ ಪ್ರಕರಣ ದಾಖಲಾಗಿದೆ. 1992ರಲ್ಲಿ ಇದರ ತೀರ್ಪು ನೀಡಲಾಗಿದ್ದು, ಖರೀದಿ ಮಾಡಿರುವ ಆಸ್ತಿ ಮರು ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಅಲ್ಲಿನಿಂದಲೂ ವಾದ-ಪ್ರತಿವಾದ ನಡೆಯುತ್ತಲೇ ಬಂದಿದೆ.