ಭೋಪಾಲ್( ಮಧ್ಯಪ್ರದೇಶ):ಸಂಸತ್ತಿನಲ್ಲಿ ಸಂಸದ ರಾಹುಲ್ ಗಾಂಧಿ ಅವರು ಅವಿಶ್ವಾಸ ನಿಲುವಳಿ ಮೇಲೆ ಮಾತನಾಡಿದ ಬಳಿಕ ಫ್ಲೈಯಿಂಗ್ ಕಿಸ್ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಕೆಲ ಮಹಿಳಾ ಸದಸ್ಯೆಯರು ರಾಹುಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಉಲ್ಲೇಖಿಸಿ ಮಧ್ಯಪ್ರದೇಶದ ಮಹಿಳಾ ಹಿರಿಯ ಐಎಎಸ್ ಅಧಿಕಾರಿಯೊಬ್ಬರು "ಮಣಿಪುರ ಮಹಿಳೆಯರ ಪರಿಸ್ಥಿತಿ ಹೇಗಿರಬೇಕು ಒಮ್ಮೆ ಯೋಚಿಸಿ" ಎಂದು ಕುಟುಕಿದ್ದಾರೆ.
ರಾಹುಲ್ ಫ್ಲೈಯಿಂಗ್ ಕಿಸ್ ವಿರುದ್ಧ ಸಂಸತ್ತಿನ ಒಳಗೆ, ಹೊರಗೆ ಪ್ರತಿಭಟಿಸುತ್ತಿರುವ ಮಹಿಳಾ ಸಂಸದರಿಗೆ, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಅವಮಾನಿಸಿದ ಘಟನೆಯನ್ನು ಉಲ್ಲೇಖಿಸಿ ಈ ರೀತಿ ಕೇಳಲಾಗಿದೆ.
ಮಧ್ಯಪ್ರದೇಶ ಕೇಡರ್ ಐಎಎಸ್ ಅಧಿಕಾರಿಯಾಗಿರುವ, ಭೋಪಾಲ್‌ನ ರಾಜ್ಯ ಸಚಿವಾಲಯದ ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಶೈಲ್ಬಾಲಾ ಮಾರ್ಟಿನ್ ಅವರು ಮಹಿಳಾ ಸಂಸದೆಯರ ಪತ್ರವನ್ನು X ನಲ್ಲಿ(ಹಿಂದಿನ ಟ್ವಿಟರ್) ಹಂಚಿಕೊಂಡು, "ಮಣಿಪುರದ ಮಹಿಳೆಯರು ಪರಿಸ್ಥಿತಿ ಹೇಗಿರಬೇಡ ಎಂದು ಯೋಚಿಸಿ" ಎಂದು ಹಿಂದಿಯಲ್ಲಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಮಾಡಿದ್ದೇನು?:ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ನಂತರ, ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ಮಾಡಿದರು. ಅದೇ ವೇಳೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಎದ್ದುನಿಂತರು. ಮಹಿಳೆಯರು ಇರುವ ಸದನದಲ್ಲಿ ವಯನಾಡು ಸಂಸದನ ಈ ನಡೆಯನ್ನು ಅವರು ಕಟುವಾಗಿ ಟೀಕಿಸಿದರು.