ಗಾಂಧಿನಗರ:ಜೂನಿಯರ್ ಕ್ಲರ್ಕ್ ಹುದ್ದೆಗಳಿಗೆ ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿ ನಡೆಸಬೇಕಿದ್ದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ 15 ಜನರನ್ನು ಬಂಧಿಸಿದ್ದು, 16 ಆರೋಪಿಯನ್ನು ಹೈದರಾಬಾದ್ನಿಂದ ಇಂದು ಬಂಧಿಸಿ ಗುಜರಾತ್ಗೆ ಕರೆದೊಯ್ಯಲಾಗಿದೆ.
ಆರೋಪಿಗಳ ಬಂಧನಕ್ಕಾಗಿ ರೂಪಿಸಲಾಗಿದ್ದ ಎಟಿಎಸ್ ಪೊಲೀಸ್ ತಂಡ ಇಂದು ಹೈದರಾಬಾದ್ನಲ್ಲಿ ದಾಳಿ ನಡೆಸಿ, ಜೀತ್ ನಾಯಕ್ ಎಂಬಾತನನ್ನು ಬಂಧಿಸಿತು. ಬಳಿಕ ವಿಚಾರಣೆಗಾಗಿ ಆರೋಪಿಯನ್ನು ಗುಜರಾರ್ಗೆ ಕರೆದೊಯ್ಯಲಾಗಿದೆ.
ಲೀಕ್ ಆದ ಪ್ರಶ್ನೆಪತ್ರಿಕೆ ಹೈದ್ರಾಬಾದ್ನಲ್ಲಿ ಮುದ್ರಣ:ಗುಜರಾತ್ ಜೂನಿಯರ್ ಕ್ಲರ್ಕ್ ಪರೀಕ್ಷೆಗೂ ಮತ್ತು ಹೈದ್ರಾಬಾದ್ಗೂ ಲಿಂಕ್ ಇದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲಿ ಸೋರಿಕೆಯಾದ ಪತ್ರಿಕೆ ಹೈದರಾಬಾದ್ನಲ್ಲಿ ಮುದ್ರಣಗೊಂಡು ಹಂಚಿಕೆಯಾಗಿದೆ. ಮುಖ್ಯ ಆರೋಪಿ ಪ್ರದೀಪ್ ನಾಯಕ್, ಕೇತನ್ ಬರೋಟ ಹೈದರಾಬಾದ್ನಲ್ಲಿ ಪ್ರಿಂಟಿಂಗ್ ಪ್ರೆಸ್ ಉದ್ಯೋಗಿಗಳಾದ ಜೀತ್ ನಾಯಕ್, ಭಾಸ್ಕರ್ ಚೌಧರಿ, ರಿದ್ದಿ ಚೌಧರಿ ಜೊತೆಗೆ ನಂಟು ಬೆಳೆಸಿಕೊಂಡಿದ್ದರು.
ಭಾರೀ ಬೇಡಿಕೆ ಇರುವ ಜೂನಿಯರ್ ಕ್ಲರ್ಕ್ ಪರೀಕ್ಷೆಯ ವೇಳೆ ಹಣ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು, ಸೋರಿಕೆಯಾದ ಪತ್ರಿಕೆಯನ್ನು ಹೈದರಾಬಾದ್ನಲ್ಲಿ ಮುದ್ರಣ ಮಾಡಿಸಿದ್ದಾರೆ. ಇದನ್ನು ಬೆನ್ನತ್ತಿದ ಪೊಲೀಸ್ ತಂಡ ಭಾನುವಾರವೇ ನಗರಕ್ಕೆ ಬಂದಿಳಿದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕೆಎಲ್ ಹೈಟೆಕ್ ಪ್ರಿಂಟಿಂಗ್ ಲಿಮಿಟೆಡ್ ಸಂಸ್ಥೆಯ ಮೇಲೆ ದಾಳಿ ಮಾಡಿದೆ. ಆರೋಪಿತ ಜೀತ್ ನಾಯಕ್ ಸೇರಿ ಮಾಲೀಕ, ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಹೈದರಾಬಾದ್ನಲ್ಲಿ ಪ್ರಶ್ನೆ ಪತ್ರಿಕೆಗಳು ತಯಾರಾಗುತ್ತಿವೆ ಎಂಬ ಅಂಶ ಹೊರಬಿದ್ದಿದ್ದು ಹೇಗೆ? ಪ್ರಮುಖ ಆರೋಪಿಗಳ ಜತೆಗಿನ ಸಂಬಂಧ ಹಾಗೂ ಸೇವಾ ಆಯೋಗದ ನೌಕರರ ಕೈವಾಡದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಜುಬ್ಲಿ ಹಿಲ್ಸ್‌ನಲ್ಲಿರುವ ಕೆಎಲ್ ಪ್ರಿಂಟಿಂಗ್ ಪ್ರೆಸ್‌ನ ಕೇಂದ್ರ ಕಚೇರಿಯನ್ನೂ ಪೊಲೀಸರು ಜಾಲಾಡಿದ್ದಾರೆ ಎಂದು ತಿಳಿದುಬಂದಿದೆ.