ಅಮರಾವತಿ: ನ್ಯಾಯಾಂಗವು ತನ್ನ ಮಿತಿಗಳನ್ನು ಮೀರಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರು ರಾಜಧಾನಿಗಳ ವಿಷಯದಲ್ಲಿ ಹೈಕೋರ್ಟ್ ಅಪ್ರಾಯೋಗಿಕ ಆದೇಶ ಹೊರಡಿಸಿದೆ. ಇದು ಫೆಡರಲ್( ಸಂಯುಕ್ತ ರಾಜ್ಯ) ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಮಾರ್ಚ್ 3 ರಂದು ಆಂಧ್ರಪ್ರದೇಶ ಹೈಕೋರ್ಟ್ ನೀಡಿರುವ ತೀರ್ಪನ್ನು ಕಾರ್ಯಗತಗೊಳಿಸಲು ಸಾಧ್ಯವೇ ಇಲ್ಲ ಎಂದು ಸಿಎಂ ಜಗನ್ಮೋಹನ್ ರೆಡ್ಡಿ ಹೇಳಿದ್ದಾರೆ.
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ವಿಧಾನಸಭಾ ಸ್ಪೀಕರ್ ಟಿ ಸೀತಾರಾಂ, ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನ ರಾಜೇಂದ್ರನಾಥ್ ಮತ್ತು ಇತರ ಹಲವಾರು ಸದಸ್ಯರು ಮಾರ್ಚ್ 3ರಂದು ಹೈಕೊರ್ಟ್ ನೀಡಿರುವ ತೀರ್ಪನ್ನು ಗೌರವಿಸುವ ಮಾತನಾಡಿದರೂ, ತೀರ್ಪಿನ ಬಗ್ಗೆ ಅಸಮಾಧಾನವನ್ನೂ ಹೊರ ಹಾಕಿದ್ದಾರೆ. ಇದೇ ವೇಳೆ, ಶಾಸಕಾಂಗದ ಸಾರ್ವಭೌಮ ಅಧಿಕಾರ ರಕ್ಷಣೆ ಮಾಡುವ ಪ್ರತಿಜ್ಞೆಯನ್ನೂ ಮಾಡಿದ್ದಾರೆ.
ವಿಕೇಂದ್ರೀಕರಣ ಮತ್ತು ನ್ಯಾಯಾಲಯದ ತೀರ್ಪು:ಈ ನಡುವೆ ಹೈಕೋರ್ಟ್ ತೀರ್ಪಿನ ಕುರಿತು ಹಿರಿಯ ಶಾಸಕ ಧರ್ಮಣ್ಣ ಪ್ರಸಾದ ರಾವ್ ಅವರು ಆಂಧ್ರಪ್ರದೇಶ ಸಿಎಂಗೆ ಪತ್ರ ಬರೆದಿದ್ದು, ಇದರಲ್ಲಿ ಆಡಳಿತ ವಿಕೇಂದ್ರೀಕರಣದ ಬಗ್ಗೆ ಪ್ರತಿಪಾದಿಸಿದ್ದಾರೆ. ಈ ಪತ್ರದ ಆಧಾರದ ಮೇಲೆ ವಿಧಾನಸಭೆಯಲ್ಲಿ ಕಿರು ಚರ್ಚೆ ನಡೆಯಿತು. ಇದೇ ವೇಳೆ ಆರು ತಿಂಗಳಲ್ಲಿ ಅಮರಾವತಿಯನ್ನು ರಾಜಧಾನಿಯಾಗಿ ಅಭಿವೃದ್ಧಿ ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆಯೂ ಸದನದಲ್ಲಿ ಚರ್ಚೆ ನಡೆಯಿತು.
ಕೋರ್ಟ್ ತೀರ್ಪಿನ ಸುತ್ತವೇ ನಡೆದ ಚರ್ಚೆ:ವಿಕೇಂದ್ರಿಕರಣದ ಮೇಲೆ ಆರಂಭವಾದ ಚರ್ಚೆಯು ಮುಖ್ಯವಾಗಿ ಹೈಕೋರ್ಟ್ ತೀರ್ಪಿನ ಸುತ್ತವೇ ಕೇಂದ್ರೀಕೃತವಾಗಿತ್ತು. ರಾಜ್ಯ ಶಾಸಕಾಂಗವು ರಾಜಧಾನಿಯನ್ನು ಸ್ಥಳಾಂತರಿಸಲು, ವಿಭಜಿಸಲು ಅಥವಾ ತ್ರಿವಿಭಜಿಸಲು ಯಾವುದೇ ಶಾಸನವನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂದರೆ ಶಾಸಕಾಂಗದ ಕೆಲಸ ಏನು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಶಾಸಕಾಂಗದ ಸಾರ್ವಭೌಮ್ಯತೆ ಬಗ್ಗೆ ಕಾನೂನು ಮಾಡದಿದ್ದರೆ ಹೇಗೆ ಎಂಬ ಪ್ರಶ್ನೆ ಕೂಡಾ ಎದುರಾಯಿತು.
ಧರ್ಮಣ್ಣ ಪ್ರಸಾದ ರಾವ್ ಮತ್ತು ಬುಗ್ಗನ ರಾಜೇಂದ್ರನಾಥ್ ಮಾತನಾಡಿ, ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ಹೈಕೋರ್ಟ್ ಶಾಸಕಾಂಗದ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಬಹುದೇ ಇಲ್ಲವೇ ಎಂಬ ಹೇಳಿದೆ ಎಂದರು. ಚರ್ಚೆಯ ಕೊನೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನ್ಯಾಯಾಂಗವು ತನ್ನ ಮಿತಿಗಳನ್ನು ದಾಟಿದೆ ಮತ್ತು ಅಪ್ರಾಯೋಗಿಕ ಆದೇಶವನ್ನು ಹೊರಡಿಸಿರುವ ಹೈಕೋರ್ಟ್ ಫೆಡರಲ್ ಮನೋಭಾವಕ್ಕೆ ವಿರುದ್ಧವಾದ ತೀರ್ಪು ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ ಬಾಲ ಕಾರ್ಮಿಕನಿಗೆ ಅಸಹಜ ಲೈಂಗಿಕ ಕಿರುಕುಳ.. ಚಿತ್ರಹಿಂಸೆ ನೀಡಿದ್ದ ಪತ್ನಿ ಅರೆಸ್ಟ್, ಪತಿ ಪರಾರಿ!
ರಾಜಧಾನಿ ರಚನೆ ನಮ್ಮ ಹಕ್ಕು;ವಿಕೇಂದ್ರೀಕರಣ ನಮ್ಮ ನೀತಿ. ರಾಜಧಾನಿಗಳ ನಿರ್ಧಾರ ನಮ್ಮ ಹಕ್ಕು ಮತ್ತು ಜವಾಬ್ದಾರಿ ಎಂದು ಜಗನ್ ಮೋಹನ್ ರೆಡ್ಡಿ ಸಮರ್ಥಿಸಿಕೊಂಡರು. ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ಹೈಕೋರ್ಟ್ ತೀರ್ಪು ಸಂವಿಧಾನವನ್ನು ಮಾತ್ರವಲ್ಲದೇ ಶಾಸಕಾಂಗದ ಅಧಿಕಾರವನ್ನೂ ಪ್ರಶ್ನಿಸುವಂತಿದೆ. ಇದು ಒಕ್ಕೂಟದ ಮನೋಭಾವ ಮತ್ತು ಶಾಸಕಾಂಗದ ಅಧಿಕಾರಕ್ಕೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.