ಎರ್ನಾಕುಲಂ (ಕೇರಳ) :ನ್ಯಾಯಾಲಯಗಳನ್ನು 'ನ್ಯಾಯ ದೇಗುಲ' ಎಂದು ಕರೆಯುತ್ತೇವೆ. ಹಾಗಂತ ಅಲ್ಲಿ ಕೂತಿರುವ ಜಡ್ಜ್ಗಳು 'ದೇವರಲ್ಲ'. ಅವರ ಮುಂದೆ ಫಿರ್ಯಾದಿಗಳು ಮತ್ತು ವಕೀಲರು ದೈನ್ಯವಾಗಿ ಕೈಕಟ್ಟಿಕೊಂಡು ನಿಲ್ಲುವ ಅಗತ್ಯವೂ ಇಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬರ ಮೇಲೆ ಪೊಲೀಸ್ ಅಧಿಕಾರಿ ಹಾಕಿದ್ದ ಕೇಸ್ಗೆ ಸಂಬಂಧಿಸಿದಂತೆ ಶನಿವಾರ ವಿಚಾರಣೆ ನಡೆಸುತ್ತಿದ್ದ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಪೀಠವು, ನ್ಯಾಯಾಲಯದ ಒಳಗೆ ಸಭ್ಯತೆ, ಶಿಸ್ತು ಮಾತ್ರ ಕಾಪಾಡಿಕೊಳ್ಳಬೇಕು. ಕೋರ್ಟ್ಗಳನ್ನು ನ್ಯಾಯ ದೇಗುಲವೆಂದು ಕರೆಯುತ್ತೇವೆ. ಆದರೆ ಪೀಠದಲ್ಲಿ ಕೂತಿರುವಯಾವುದೇ ನ್ಯಾಯಾಧೀಶರು ದೇವರಂತೆ ಅಲ್ಲ. ಅಲ್ಲಿ ದೇವರು ಕುಳಿತುಕೊಳ್ಳುವುದೂ ಇಲ್ಲ. ನ್ಯಾಯಾಧೀಶರಾದವರು ತಮ್ಮ ಸಾಂವಿಧಾನಿಕ ಕರ್ತವ್ಯಗಳು ಮತ್ತು ಹೊಣೆಯನ್ನು ನಿಭಾಯಿಸುತ್ತಾರೆ ಅಷ್ಟೆ ಎಂದು ಹೇಳಿದರು.
ಅರ್ಜಿದಾರ ಮಹಿಳೆ ತನ್ನ ಮೊಕದ್ದಮೆಯನ್ನು ಖುದ್ದಾಗಿ ವಾದಿಸಲು ಬಂದಿದ್ದಾಗ, ಕೈಮುಗಿದು ಭಾಗಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ನಿಂತಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು, ಅವರಿಗೆ ಹೀಗೆ ನಿಲ್ಲಬೇಡಿ. ಆರಾಮವಾಗಿ ವಾದಿಸಿ ಎಂದು ಹೇಳಿದರು. ಜೊತೆಗೆ ಯಾವುದೇ ದಾವೆದಾರರು ಅಥವಾ ವಕೀಲರು ತಮ್ಮ ಪ್ರಕರಣವನ್ನು ನ್ಯಾಯಾಲಯದ ಮುಂದೆ ಕೈ ಕಟ್ಟಿಕೊಂಡು ವಾದಿಸಬೇಕಾಗಿಲ್ಲ. ನ್ಯಾಯಾಲಯದ ಮುಂದೆ ಕೇಸ್ ಬಗ್ಗೆ ವಾದಿಸುವುದು ಸಾಂವಿಧಾನಿಕ ಹಕ್ಕಾಗಿದೆ ಎಂದರು.