ನವದೆಹಲಿ:ನ್ಯಾಯಾಧೀಶರು ಶಿಸ್ತು ಪಾಲಿಸಬೇಕು. ಮುಖ್ಯ ನ್ಯಾಯಮೂರ್ತಿಗಳು ನಿರ್ದಿಷ್ಟವಾಗಿ ನಿಯೋಜಿಸದ ಹೊರತು ಯಾವುದೇ ಪ್ರಕರಣವನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಜಡ್ಜ್ಗಳಿಗೆ ನೀತಿಪಾಠ ಹೇಳಿದೆ.
8 ಎಫ್‌ಐಆರ್‌ಗಳನ್ನು ಒಟ್ಟು ಮಾಡಲು ಕೋರಿರುವ ಸಿವಿಲ್ ರಿಟ್ ಅರ್ಜಿಯ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು, ರಾಜಸ್ಥಾನ ಹೈಕೋರ್ಟ್ ಮೇ ತಿಂಗಳಲ್ಲಿ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ.
ಎಂಟು ಎಫ್‌ಐಆರ್‌ಗಳನ್ನು ಒಂದುಗೂಡಿಸಲು ಅವಕಾಶ ನೀಡಿರುವುದು ಸರಿಯಲ್ಲ. ಇದರಿಂದ ಬೇರೊಬ್ಬ ನ್ಯಾಯಾಧೀಶರ ಮುಂದೆ ಹೋಗಬಹುದಾದ ಕೇಸ್ ಅನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದೆ. ಇದೇ ವೇಳೆ ನ್ಯಾಯಾಧೀಶರ ನ್ಯಾಯದಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠವು, ಮುಖ್ಯ ನ್ಯಾಯಾಧೀಶರು ನಿರ್ದಿಷ್ಟವಾಗಿ ವಹಿಸದ ಕೇಸ್ಗಳ ವಿಚಾರಣೆಗೆ ಪಡೆಯಬಾರದು. ಇದು ಔಚಿತ್ಯವಲ್ಲದ ಕೃತ್ಯ. ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಮೂವರು ವ್ಯಕ್ತಿಗಳು ಮೊದಲು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಅವರಿಗೆ ಯಾವುದೇ ಮಧ್ಯಂತರ ಪರಿಹಾರವನ್ನೂ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದೆ.
ರೋಸ್ಟರ್ ಪದ್ಧತಿ ತಪ್ಪಿಸಲು ರಿಟ್:ಇದಾದ ನಂತರ, ಎಂಟು ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಲು ಸಿವಿಲ್ ರಿಟ್ ಅರ್ಜಿಯನ್ನು ಹಾಕಲಾಗಿದೆ. ಜಡ್ಜ್ಗಳ ರೋಸ್ಟರ್ ಪದ್ಧತಿಯಿಂದ ತಪ್ಪಿಸಲು ಈ ರೀತಿಯ ಅರ್ಜಿ ಹಾಕಿಸಲಾಗಿದೆ ಎಂದು ಅರ್ಜಿದಾರ ಪೀಠದ ಗಮನಕ್ಕೆ ತಂದರು. ಆಗ ಪೀಠವು, ಇದೊಂದು ವಿಶೇಷ ಪ್ರಕರಣವಾಗಿದೆ. ಇದರಲ್ಲಿ ಕಾನೂನಿನ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಎಂದು ಹೇಳಿತು.
ಮುಖ್ಯ ನ್ಯಾಯಾಧೀಶರು ಸೂಚಿಸಿದ ರೋಸ್ಟರ್‌ನಲ್ಲಿ ಕ್ರಿಮಿನಲ್ ರಿಟ್ ಅರ್ಜಿಗಳಿಗೆ ಪ್ರತ್ಯೇಕ ರೋಸ್ಟರ್ ಇದೆ. ಆದರೆ ಎಲ್ಲವನ್ನೂ ಒಟ್ಟುಗೂಡಿಸಲಾಗಿದೆ. ನ್ಯಾಯಾಲಯಗಳು ಇಂತಹ ಆಚರಣೆಯನ್ನು ಅನುಮತಿಸಿದಲ್ಲಿ, ಮುಖ್ಯ ನ್ಯಾಯಾಧೀಶರು ಸೂಚಿಸಿದ ರೋಸ್ಟರ್‌ಗೆ ಏನು ಅರ್ಥವಿದೆ. ನ್ಯಾಯಾಧೀಶರು ಶಿಸ್ತನ್ನು ಪಾಲಿಸಬೇಕು. ಮುಖ್ಯ ನ್ಯಾಯಮೂರ್ತಿಗಳು ವಹಿಸದ ಯಾವುದೇ ಪ್ರಕರಣವನ್ನು ಮುಟ್ಟಬಾರದು ಎಂದು ಪೀಠ ಹೇಳಿದೆ.
ಸಿವಿಲ್ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದ್ದರೂ, ಅದನ್ನು ನ್ಯಾಯಾಧೀಶರು ಕ್ರಿಮಿನಲ್ ರಿಟ್ ಅರ್ಜಿಯನ್ನಾಗಿ ಪರಿವರ್ತಿಸಬೇಕು. ಅದು ರೋಸ್ಟರ್ ನ್ಯಾಯಾಧೀಶರ ಮುಂದೆ ಹೋಗುತ್ತದೆ. ಅದನ್ನು ಅವರೇ ಬಗೆಹರಿಸಬೇಕು. ಅರ್ಜಿದಾರರು ಮೇಲ್ಮನವಿಯನ್ನು ಸಲ್ಲಿಸುವಾಗ ಅವರು ಸಿವಿಲ್ ರಿಟ್ ಅರ್ಜಿಯನ್ನು ಹಾಕಲು ಅನುಮತಿ ನೀಡುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ:ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ : ಏಕ ಸದಸ್ಯ ಪೀಠದ ಆದೇಶವನ್ನು ಅಮಾನತ್ತಿನಲ್ಲಿಟ್ಟ ಹೈಕೋರ್ಟ್