ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ತನಿಖಾ ಸಂಸ್ಥೆಗಳೊಂದಿಗೆ ತಮ್ಮ ಸುದ್ದಿ ಮೂಲಗಳನ್ನು ಹಂಚಿಕೊಳ್ಳದಂತೆ ತಡೆಯುವ ಯಾವುದೇ ಶಾಸನಬದ್ಧ ವಿನಾಯಿತಿ ಪತ್ರಕರ್ತರಿಗೆ ಇಲ್ಲ ಎಂದು ಹೇಳಿರುವ ವಿಶೇಷ ಸಿಬಿಐ ಕೋರ್ಟ್, ಪ್ರಕರಣವೊಂದರ ಮುಕ್ತಾಯ ವರದಿಯನ್ನು (closure report) ತಿರಸ್ಕರಿಸಿದೆ. ಮುಕ್ತಾಯ ವರದಿ ತಿರಸ್ಕರಿಸಿದ ಸಿಬಿಐ ನ್ಯಾಯಾಲಯ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗೆ ನಿರ್ದೇಶಿಸಿದೆ. ಯಾವುದೇ ತನಿಖೆಯ ಸಮಯದಲ್ಲಿ ಸುದ್ದಿಯ ಮೂಲವನ್ನು ತಿಳಿಯುವುದು ಅಗತ್ಯ ಎನಿಸಿದಾಗ ಮತ್ತು ಅದು ವಿಚಾರಣೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದಾಗ, ತನಿಖಾ ಸಂಸ್ಥೆಯು ಈ ವಿಷಯವನ್ನು ಸಂಬಂಧಿಸಿದ ಪತ್ರಕರ್ತರ ಗಮನಕ್ಕೆ ತರಬಹುದು ಎಂದು ವಿಶೇಷ ಸಿಬಿಐ ಕೋರ್ಟ್ ಹೇಳಿದೆ.
ತನಿಖೆ ನಡೆಯುತ್ತಿರುವ ಪ್ರಕರಣದ ಬಗ್ಗೆ ಸಾರ್ವಜನಿಕ ವ್ಯಕ್ತಿಯೊಬ್ಬರು ಯಾವುದೇ ಮಾಹಿತಿ ಅಥವಾ ಘಟನೆಯ ಬಗ್ಗೆ ಸಂಪರ್ಕ ಹೊಂದಿದ್ದರೆ, ಅಂಥ ಸಾರ್ವಜನಿಕ ವ್ಯಕ್ತಿಯನ್ನು ವಿಚಾರಣೆಗೊಳಪಡಿಸುವ ಎಲ್ಲ ಅಧಿಕಾರವನ್ನು ಭಾರತೀಯ ದಂಡ ಸಂಹಿತೆ (IPC) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಗಳ ಅಡಿ ತನಿಖಾ ಸಂಸ್ಥೆಯು ಹೊಂದಿರುತ್ತದೆ ಮತ್ತು ಹಾಗೆ ಪ್ರಕರಣದ ಮಾಹಿತಿ ಹೊಂದಿದ ಸಾರ್ವಜನಿಕ ವ್ಯಕ್ತಿಗಳು ವಿಚಾರಣೆಯಲ್ಲಿ ಭಾಗಿಯಾಗುವ ಕಾನೂನು ಬದ್ಧ ಜವಾಬ್ದಾರಿ ಹೊಂದಿರುತ್ತಾರೆ ಎಂದು ವಿಶೇಷ ಸಿಬಿಐ ಕೋರ್ಟ್ ಹೇಳಿದೆ.
ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (CMM) ಅಂಜನಿ ಮಹಾಜನ್ ಮೇಲಿನ ಉಲ್ಲೇಖಗಳನ್ನು ಮಾಡಿದರು ಮತ್ತು ದಾಖಲೆಗಳ ಫೋರ್ಜರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಮುಕ್ತಾಯ ವರದಿ ತಿರಸ್ಕರಿಸಿದರು. ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಲಾದ ದಾಖಲೆಗಳನ್ನು ಪಬ್ಲಿಷ್ ಮತ್ತು ಪ್ರಸಾರ ಮಾಡಿದ ಪತ್ರಕರ್ತರು ಅದರ ಮೂಲಗಳನ್ನು ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ಮುಂದುವರಿಸಲಾಗುತ್ತಿಲ್ಲ ಎಂದು ಸಿಬಿಐ ಹೇಳಿತ್ತು.