ಸೀಧಿ, ಮಧ್ಯಪ್ರದೇಶ : ಇಬ್ಬರು ಪತ್ರಕರ್ತರು ಸೇರಿದಂತೆ 8 ಮಂದಿಯನ್ನು ಬಂಧಿಸಿ, ಬಟ್ಟೆಗಳನ್ನು ಬಿಚ್ಚಿಸಿ ಅರೆ ನಗ್ನವಾಗಿ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆ ಕುರಿತು ಸ್ವತಃ ಪತ್ರಕರ್ತನೇ ಮಾಹಿತಿ ನೀಡಿದ್ದಾನೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 2ರಂದು ಘಟನೆ ನಡೆದಿದ್ದು, ಫೋಟೋಗಳು ವೈರಲ್ ಆದ ನಂತರ ವಿಚಾರ ಬೆಳಕಿಗೆ ಬಂದಿದೆ.
ನಡೆದಿದ್ದೇನು? :ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ರಂಗಭೂಮಿ ಕಲಾವಿದ ನೀರಜ್ ಕುಂದರ್ ಎಂಬುವರನ್ನು ಕೊತ್ವಾಲಿ ಪೊಲೀಸರು ಬಂಧಿಸಿದ್ದರು. ನೀರಜ್ ಕುಂದರ್ ಬಂಧನವನ್ನು ಖಂಡಿಸಿ, ಇತರ ರಂಗಭೂಮಿ ಕಲಾವಿದರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಿದ್ದರು. ಈ ಪ್ರತಿಭಟನೆಯನ್ನು ವರದಿ ಮಾಡಲು ಸ್ಥಳೀಯ ಚಾನೆಲ್ನಲ್ಲಿ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಮತ್ತು ತನ್ನದೇ ಯುಟ್ಯೂಬ್ ಚಾನೆಲ್ ಹೊಂದಿರುವ ಕನಿಷ್ಕ್ ತಿವಾರಿ ತಮ್ಮ ಕ್ಯಾಮೆರಾಮನ್ನೊಂದಿಗೆ ತೆರಳಿದ್ದರು.
ಘಟನೆಯ ವರದಿ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರು ಮತ್ತು ಪತ್ರಕರ್ತರನ್ನು ಬಂಧಿಸಿದ್ದಾರೆ. ನಂತರ ಅವರನ್ನು ಸುಮಾರು 18 ಗಂಟೆಗಳ ಕಾಲ ಲಾಕ್ಅಪ್ನಲ್ಲಿ ಇರಿಸಲಾಗಿದ್ದು, ಥಳಿಸಿ, ಎಲ್ಲರ ಬಟ್ಟೆಗಳನ್ನು ಬಿಚ್ಚಿಸಿ, ಅರೆ ನಗ್ನವಾಗಿಸಲಾಗಿದೆ. ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದ್ದು, ಒಂದು ದಿನದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬೆತ್ತಲೆ ಮೆರವಣಿಗೆ ಮಾಡುವ ಬೆದರಿಕೆ :ಘಟನೆಯ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿರುವ ಪತ್ರಕರ್ತ ಕನಿಷ್ಕ್ ತಿವಾರಿ, 'ಪೊಲೀಸ್ ಠಾಣೆಯ ಉಸ್ತುವಾರಿಯಾಗಿರುವ ಅಭಿಷೇಕ್ ಸಿಂಗ್ ಪರಿಹಾರ್ ಅವರು ಶಾಸಕ ಕೇದಾರ್ನಾಥ್ ಶುಕ್ಲಾ ವಿರುದ್ಧ ವರದಿ ಮಾಡಿದರೆ ನನ್ನನ್ನು ಮತ್ತು ಇತರರನ್ನು ನಗರದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಏಪ್ರಿಲ್ 2ರಂದು ರಾತ್ರಿ 8 ಗಂಟೆಗೆ ನಮ್ಮನ್ನು ಬಂಧಿಸಲಾಗಿದ್ದು, ಬಟ್ಟೆಗಳನ್ನು ತೆಗೆಯುವಂತೆ ಮಾಡಿದ್ದಾರೆ. ಮರುದಿನ ಸಂಜೆ 6 ಗಂಟೆಯವರೆಗೆ ಥಳಿಸಿ, ಕಿರುಕುಳ ನೀಡಲಾಗಿದೆ' ಎಂದಿದ್ದಾರೆ.