ನವದೆಹಲಿ:ಭಯೋತ್ಪಾದನೆ ನಿಗ್ರಹ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳ ಭಾಗವಾಗಿ ಭಾರತೀಯ ಸೇನೆ ಮತ್ತು ಬಾಂಗ್ಲಾದೇಶ ಸೇನೆಯ ನಡುವಿನ ಜಂಟಿ ಮಿಲಿಟರಿ ಅಭ್ಯಾಸದ 10ನೇ ಆವೃತ್ತಿಯು ಬಾಂಗ್ಲಾದೇಶದ ಜಶೋರ್ನಲ್ಲಿ ಇಂದು ಮುಕ್ತಾಯಗೊಂಡಿತು.
ಜೂನ್ 5 ರಿಂದ 16 ರವರೆಗೆ ನಡೆದ ಸಂಪ್ರೀತಿ ಸಮರಾಭ್ಯಾಸ ಕೊನೆಗೊಂಡಿದ್ದು, 12 ದಿನಗಳ ಕಾಲ ನಡೆದ ಈ ಜಂಟಿ ಅಭ್ಯಾಸವು ಎರಡೂ ಸೇನೆಗಳ ನಡುವೆ ಯಾವುದೇ ಕಾರ್ಯಾಚರಣೆಯಲ್ಲಿ ಭಾಗಿಯಾಗುವಾಗ ನೀಡುವ ಸಹಕಾರ ಮತ್ತು ತಂತ್ರಗಳನ್ನು ಇದು ಹೆಚ್ಚಿಸಿದೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.
ಈ ಹಿಂದೆ ಅಂದರೆ 2020ರಲ್ಲಿ ಎರಡೂ ದೇಶಗಳ ಸೇನಾಪಡೆಗಳ ಸಮರಾಭ್ಯಾಸವಾದ ಸಂಪ್ರೀತಿ 9 ಆವೃತ್ತಿಯನ್ನು ಮೇಘಾಲಯದಲ್ಲಿ ನಡೆಸಲಾಗಿತ್ತು.
ಏನಿದು ಸಂಪ್ರೀತಿ ಸಮರಾಭ್ಯಾಸ?:ಸಂಪ್ರೀತಿ ಹೆಸರಿನಲ್ಲಿ ನಡೆಯುವ ಸೇನಾಭ್ಯಾಸವು ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಒಳಗೊಂಡಿದೆ. ಮೊದಲ ಬಾರಿಗೆ 2009 ರಲ್ಲಿ ಜಂಟಿ ಸೇನಾಭ್ಯಾಸವನ್ನು ನಡೆಸಲಾಯಿತು. ಇದನ್ನು ಪ್ರತಿ ವರ್ಷ ಅಥವಾ 2 ವರ್ಷಕ್ಕೊಮ್ಮೆ ಉಭಯ ರಾಷ್ಟ್ರಗಳಲ್ಲಿ ಆಯೋಜಿಸಲಾಗುತ್ತದೆ.
1971ರಲ್ಲಿ ನಡೆದ ಬಾಂಗ್ಲಾದೇಶಕ್ಕಾಗಿ ನಡೆದ ಯುದ್ಧ ವಿಜಯದ ಸಂಭ್ರಮ ಮತ್ತು ಬಾಂಗ್ಲಾ ವಿಮೋಚನಾ ದಿನಾಚರಣೆಯ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 2021 ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಬಾಂಗ್ಲಾದೇಶ ಸೇನೆ ಭಾರತದ ಸೇನೆಯ ಜೊತೆಗೆ ಪರೇಡ್ನಲ್ಲಿ ಭಾಗವಹಿಸಿತ್ತು.
ಇದನ್ನೂ ಓದಿ:ಅಗ್ನಿಪಥ್ ಯೋಜನೆ ಕುರಿತು ಸ್ಪಷ್ಟೀಕರಣ: ಯುವಕರಿಗೆ ಅನ್ಯಾಯವಾಗಲ್ಲ ಎಂದ ಕೇಂದ್ರ