ನವದೆಹಲಿ :ಅಮೆರಿಕ ಮೂಲದ ಜಾಗತಿಕ ಔಷಧ ಕಂಪನಿ ಜಾನ್ಸನ್ & ಜಾನ್ಸನ್ ಭಾರತದಲ್ಲಿ ಸಿಂಗಲ್-ಡೋಸ್ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.
ನಮ್ಮ ಸಿಂಗಲ್-ಡೋಸ್ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ನಾವು ಬದ್ಧವಾಗಿದ್ದೇವೆ ಹಾಗೂ ಭಾರತ ಸರ್ಕಾರದೊಂದಿಗೆ ನಡೆಯುತ್ತಿರುವ ಚರ್ಚೆಗಳನ್ನು ಎದುರು ನೋಡುತ್ತಿದ್ದೇವೆ.
ಇದಕ್ಕಾಗಿ ನಾವು ಆಗಸ್ಟ್ 5ರಂದು ಅಂದರೆ ನಿನ್ನೆ ತುರ್ತು ಬಳಕೆಗೆ ಅನುಮೋದನೆ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ಜಾನ್ಸನ್ & ಜಾನ್ಸನ್ನ ಭಾರತದ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಲಸಿಕೆ ಪೂರೈಕೆ ಹೆಚ್ಚಿಸದಿದ್ದರೆ ಕೋವಿಡ್ ಪರಿಸ್ಥಿತಿ ಭೀಕರವಾಗಬಹುದು: ಮೋದಿಗೆ ಪತ್ರ ಬರೆದ ಮಮತಾ
ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಮುಂಬರಲಿದೆ ಎಂದು ಈಗಾಗಲೇ ತಜ್ಞರು ಮಾಹಿತಿ ನೀಡಿದ್ದು, ಭಾರತ ತನ್ನ ಲಸಿಕೆ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.
ತಮ್ಮ ಲಸಿಕೆಯು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಶೇ.85ರಷ್ಟು ಪರಿಣಾಮಕಾರಿ ಅನ್ನೋದನ್ನ ತೋರಿಸಿದೆ ಎಂದು ಜಾನ್ಸನ್ & ಜಾನ್ಸನ್ ಹೇಳಿಕೊಂಡಿದೆ. ಈ ವ್ಯಾಕ್ಸಿನ್ಗೆ ಭಾರತ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ದೇಶದಲ್ಲಿ ಸತತ ಮೂರು ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 44,643 ಕೇಸ್ಗಳು ಹಾಗೂ 464 ಸಾವು ವರದಿಯಾಗಿವೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,18,56,757ಕ್ಕೆ ಹಾಗೂ ಮೃತರ ಸಂಖ್ಯೆ 4,26,754ಕ್ಕೆ ಏರಿಕೆಯಾಗಿದೆ.