ಕೋಲ್ಕತ್ತಾ:ಶಾಲಾ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಟಿಎಂಸಿ ಉಚ್ಚಾಟಿತ ಯುವ ನಾಯಕ ಕುಂತಲ್ ಘೋಷ್ ಅವರಿಂದ ಐಷಾರಾಮಿ ಕಾರು ಪಡೆದ ಆರೋಪ ಎದುರಿಸುತ್ತಿರುವ ನಟ ಬೋನಿ ಸೆಂಗುಪ್ತಾ ಅವರ ಬಳಿಕ ಮತ್ತೊಬ್ಬ ನಟಿ ಕೂಡ ಕಾರು ಗಿಫ್ಟ್ ಪಡೆದುಕೊಂಡಿರುವ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ನಟಿ, ಟಿಎಂಸಿ ನಾಯಕಿಯಾಗಿರುವ ಸಯೋನಿ ಘೋಷ್ ಅವರನ್ನು 11 ಗಂಟೆಗಳ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.
ನಟ ಬೋನಿ ಸೆಂಗುಪ್ತಾ ಎಕ್ಸ್‌ಯುವಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಈ ಕುರಿತು ನಟ ವಿಚಾರಣೆಗೆ ಒಳಪಟ್ಟಿದ್ದರು. ಇದೀಗ ಆರೋಪಿ ಕುಂತಲ್ ಟಾಲಿವುಡ್ ನಟಿ ಸಯೋನಿ ಘೋಷ್ ಅವರಿಗೂ ಎಕ್ಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾಗಿ ತಿಳಿದುಬಂದಿದೆ.
ನಟಿ ಗಿಫ್ಟ್ ಆಗಿ ಬಂದ ಕಾರಿನಲ್ಲಿ ಓಡಾಡಿದ್ದಾರ ಎಂದು ಎಂದು ಕೂಡ ತಿಳಿದುಬಂದಿದೆ. ಕಾರಿನ ದಾಖಲೆಗಳನ್ನು ಸಲ್ಲಿಸಲು ಇಡಿ ಸೂಚಿಸಿದೆ. ಅಲ್ಲದೇ, ನಿನ್ನೆ ನಟಿಗೆ 11 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ. ಆಕೆಯನ್ನು ಮತ್ತೆ ವಿಚಾರಣೆಗೆ ಕರೆಯಬಹುದು ಎಂದು ಮೂಲಗಳು ತಿಳಿಸಿವೆ.
ಗಿಫ್ಟ್ ಕಾರು ವಾಪಸ್:ಅದ್ಯಾವಾಗ ಶಾಲಾ ಉದ್ಯೋಗ ಹಗರಣ ಬಯಲಾಯ್ತೋ ಆಗ ಆರೋಪಿ ಕುಂತಲ್ ನೀಡಿದ ಕಾರು ಗಿಫ್ಟನ್ನು ವಾಪಸ್ ನೀಡಲಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಶುಕ್ರವಾರ ನಡೆದ ವಿಚಾರಣೆಯ ವೇಳೆ ಇಡಿ ತನಿಖಾಧಿಕಾರಿಗಳು ನಟಿ ಸಯೋನಿ ಘೋಷ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕುಂತಲ್ ಘೋಷ್ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದು ಯಾಕೆ ಎಂಬುದಕ್ಕೆ ಉತ್ತರ ಹುಡುಕುತ್ತಿದ್ದಾರೆ. ಆರೋಪಿ ಶೋರೂಂನಿಂದ ಅನಾಮಧೇಯವಾಗಿ ಕಾರು ಖರೀದಿ ಮತ್ತು EMI ಅನ್ನು ಏಕೆ ಪಾವತಿಸುತ್ತಿದ್ದರು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ವಿಚಾರಣೆಯ ವೇಳೆ ನಟಿ ನೀಡಿದ ಉತ್ತರಗಳಿಂದ ಇಡಿ ತನಿಖಾಧಿಕಾರಿಗಳು ತೃಪ್ತರಾಗಿಲ್ಲ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ಆರೋಪಿ ಕುಂತಲ್ ಘೋಷ್ ಮತ್ತು ನಟ ಬೋನಿ ಸೆಂಗುಪ್ತಾ ನಡುವೆ ಸಂಪರ್ಕವನ್ನು ಪತ್ತೆ ಮಾಡಲಾಗಿತ್ತು. ಕುಂತಲ್ ಘೋಷ್ ನಟನಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಕೂಡ ಗೊತ್ತಾಗಿತ್ತು. ನಂತರ, ನಟ ಕಾರಿನ ಹಣವನ್ನು ಹಿಂದಿರುಗಿಸಿದ್ದರು. ಕೋಲ್ಕತ್ತಾದ ಬ್ಯೂಟಿ ಪಾರ್ಲರ್ ಮಾಲೀಕ ಸೋಮ ಚಕ್ರವರ್ತಿ ಎಂಬುವರ ಖಾತೆಗೂ ಕುಂತಲ್ ಲಕ್ಷ ಲಕ್ಷ ರೂ. ಹಣ ಸಂದಾಯ ಮಾಡುತ್ತಿದ್ದುದು ತನಿಖೆಯಲ್ಲಿ ಬಯಲಾಗಿತ್ತು.
ಬ್ಯೂಟಿ ಪಾರ್ಲರ್‌ನ ಮಾಲೀಕ ಸೋಮ ಚಕ್ರವರ್ತಿ ಅವರ ಖಾತೆಗೆ ಕುಂತಲ್ ಘೋಷ್ ವರ್ಗಾವಣೆ ಮಾಡಿದ ಹಣದ ಮೂಲವನ್ನು ತಿಳಿಯಲು ಇಡಿ ತನಿಖಾಧಿಕಾರಿಗಳೂ ಪ್ರಯತ್ನಿಸುತ್ತಿದ್ದಾರೆ. ಪಾರ್ಲರ್ ಸುತ್ತಲೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲಿನ ವ್ಯವಹಾರಗಳ ಬಗ್ಗೆ ನಿಗಾ ಇಡಲಾಗಿದೆ. ಕಾರು ಗಿಫ್ಟ್ ಪಡೆದ ಆರೋಪ ಕೇಳಿ ಬಂದ ಬಳಿಕ ನಟಿ ಸಯೋನಿ ಘೋಷ್ ನಾಪತ್ತೆಯಾಗಿದ್ದರು. ಅವರೊಂದಿಗೆ ಸಂವಹನ ನಡೆಸಲೂ ಸಾಧ್ಯವಾಗಿರಲಿಲ್ಲ. ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ಜಾರಿ ಮಾಡಿದ ನಂತರ ಸಯೋನಿ ಅನಿವಾರ್ಯವಾಗಿ ಅಧಿಕಾರಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿBengaluru crime : ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ : ಸರ್ಕಾರಿ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು