ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರ ಸರ್ಕಾರ ಆರ್ಟಿಕಲ್ 370 ನೇ ವಿಧಿಯನ್ನು ರದ್ದು ಮಾಡಿ, ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಳಿತ ಪ್ರದೇಶಗಳಾಗಿ ವಿಂಗಡಣೆ ಮಾಡಿತ್ತು. ಹೀಗಾಗಿ ಅಲ್ಲೀಗ ಲೆಫ್ಟಿನೆಂಟ್ ಜನರಲ್ಗಳ ಆಡಳಿತವಿದೆ. ಅಲ್ಲಿನ ರಾಜಕೀಯ ಪಕ್ಷಗಳು ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿವೆ.
ಈ ಬಗ್ಗೆ ಮಾತನಾಡಿದ್ದ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ತಮ್ಮ ಪಕ್ಷದ ಕಾರ್ಯಕರ್ತರಿಗೆ "ವಿಧಾನಸಭಾ ಚುನಾವಣೆಯ ಅನುಪಸ್ಥಿತಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪೆಟ್ರೋಲ್ ವ್ಯರ್ಥ ಮಾಡಬೇಡಿ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೊಂದು ಕಡೆ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, "ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಸೂಕ್ತ ಸಮಯದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಚುನಾವಣೆ ನಡೆಯುವ ಬಗ್ಗೆ ಸುಳಿವು:ಈ ನಡುವೆ ಒಂದು ಪ್ರಮುಖ ಬೆಳವಣಿಗೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿ ಪಾಂಡುರಂಗ್ ಕೆ ಪೋಲ್ ಅವರು, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿ ಮುದ್ರಿಸಲು ಬಿಡ್ ಆಹ್ವಾನಿಸಿದ್ದಾರೆ. ಈ ಬಿಡ್ ಅಧಿಸೂಚನೆಯಲ್ಲಿ, ಅರ್ಜಿದಾರರು ತಮ್ಮ ಅರ್ಜಿಗಳನ್ನು ಜೆಮ್ ಪೋರ್ಟಲ್ ಮೂಲಕ 180 ದಿನಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ ಎಂದಿದ್ದಾರೆ. ಈ ವಿಚಾರ ಈಗ ರಾಜ್ಯದಲ್ಲಿ ಚುನಾವಣೆಗೆ ತಯಾರಿ ನಡೆಯುತ್ತಿದೆ ಎಂಬ ಸುಳಿವನ್ನು ನೀಡಿದೆ.
"ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮತದಾರರ ಪಟ್ಟಿಗಳ ಮುದ್ರಣ ನೀಡಬೇಕು. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಕರಡು ರೂಪದಲ್ಲಿ ಮತ್ತು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆಯ ರೂಪದಲ್ಲಿ ಮುದ್ರಿಸಬೇಕಾದ ಮತದಾರರ ಪಟ್ಟಿಗಳ ತಾತ್ಕಾಲಿಕ ಸಂಖ್ಯೆ 773160 ಆಗಿರುತ್ತದೆ'' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಹಾಗಾಗಿ ಅರ್ಜಿದಾರರು ‘ಮುದ್ರಣಕ್ಕೆ ದೊಡ್ಡ ಮೂಲ ಸೌಕರ್ಯ’ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಅರ್ಜಿ ಮತ್ತು ಮಾದರಿ ಪಿಡಿಎಫ್ ಅನುಮೋದಿಸಿದ ನಂತರ, ಅರ್ಜಿದಾರರು ಹತ್ತು ದಿನಗಳೊಳಗೆ ಎಲ್ಲಾ ಮುದ್ರಿತ ಫೋಟೋ ಮತದಾರರ ಪಟ್ಟಿಗಳನ್ನು ಸಲ್ಲಿಸಬೇಕು. ಮತ್ತು ಈ ಸಮಯದಲ್ಲಿ ಚುನಾವಣೆಗಳನ್ನು ಘೋಷಿಸಿದರೆ, ಅವುಗಳನ್ನು ಏಳು ದಿನಗಳಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿ, "ಚುನಾವಣೆ ನಡೆಸುವುದು ನಮ್ಮ ಕೈಯಲ್ಲಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಈ ತಿಂಗಳ ಕೊನೆಯ ವಾರದಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟ ಸಭೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಇಲ್ಲಿಮ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಯಲಿದೆ. ಈ ಸಭೆಯ ನಂತರ ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಖರ್ಗೆ ಅಥವಾ ರಾಹುಲ್ ಪ್ರಧಾನಿ ಸಾಧ್ಯತೆ: ಶಶಿ ತರೂರ್