ನವದೆಹಲಿ:ಕಾಂಗ್ರೆಸ್ ಹೈಕಮಾಂಡ್ ಹಾಗೂ ಉತ್ತರ ಪ್ರದೇಶ ಕೈ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿರುವ ಜಿತಿನ್ ಪ್ರಸಾದ್ ಅವರ ಬಿಜೆಪಿ ಸೇರ್ಪಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಒಂದು ಕುಟುಂಬದ ಪಕ್ಷವಾಗಿದೆ ಎಂದು ರೆಬಲ್ ಶಾಸಕಿ ಆದಿತಿ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕರು ಇದಕ್ಕೆ ತಿರುಗೇಟು ನೀಡಿದ್ದಾರೆ. ಜಿತಿನ್ ಪ್ರಸಾದ್ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ವ್ಯಕ್ತಿ. ಆತನಿಗೆ ಎಲ್ಲಾ ರೀತಿಯ ಗೌರವವನ್ನು ನೀಡಿದ್ದೇವೆ, ನಾವು ನಿರ್ಲಕ್ಷಿಸಿರಲಿಲ್ಲ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತು ಮಾತನಾಡುತ್ತಾ, ಜಿತಿನ್ ಪ್ರಸಾದ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದೇವೆ. ಪಶ್ಚಿಮ ಬಂಗಾಳದ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಪ್ರತಿ ಚುನಾವಣೆಯಲ್ಲೂ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಇಷ್ಟಾಗಿಯೂ ಪಕ್ಷಕ್ಕಾಗಿ ಪ್ರಸಾದ್ ಮತ್ತವರ ತಂದೆ ಕೆಲಸ ಮಾಡಿದ್ದರೂ ಕಾಂಗ್ರೆಸ್ ಹಾಗೂ ಅದರ ಸಿದ್ಧಾಂತಗಳ ಮೇಲೆ ಆರೋಪ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.