ಪಾಟ್ನಾ(ಬಿಹಾರ): ಇಲ್ಲಿನ ಲೋಕಸೇವಾ ಆಯೋಗ ನಡೆಸಿದ್ದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಕುರಿತು ಕೇಳಿದ ಪ್ರಶ್ನೆ ಬಿಹಾರದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ, ಹಿಂದೂಸ್ತಾನಿ ಅವಾಮ್ ಮೋರ್ಚಾ ಸೇರಿದಂತೆ ಇತರ ಪಕ್ಷಗಳು ಸಿಎಂ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿವೆ.
ಸಿಎಂ ಕುರಿತು ಪ್ರಶ್ನೆ ಕೇಳಿದ ಜಿತನ್ ರಾಮ್ ಮಾಂಝಿ: ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ, ಶಿಕ್ಷಕರ ನೇಮಕಾತಿಯಲ್ಲಿ 'ಇಂಡಿಯಾ' ಮೈತ್ರಿಯ ಪ್ರಶ್ನೆಯ ನಂತರ, ಈಗ ಈ ಪ್ರಶ್ನೆಯನ್ನು ಬಹುಶಃ ಬಿಪಿಎಸ್ಸಿಯ ಮುಂದಿನ ಪರೀಕ್ಷೆಯಲ್ಲಿ ಕೇಳಬಹುದು ಎಂದು ನಿತೀಶ್ ಕುಮಾರ್ ಅವರಿಗೆ ಏನಾಗಿದೆ? ಎಂದು ಬಹು ಆಯ್ಕೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಾಲ್ಕು ಉತ್ತರಗಳನ್ನೂ ನೀಡಿದ್ದಾರೆ. A. ಮಾನಸಿಕ ಅಸ್ವಸ್ಥರಾಗಿದ್ದಾರೆ. B. ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತೇನೆ ಎಂಬ ಬಗ್ಗೆ ಆತಂಕಗೊಂಡಿದ್ದಾರೆ. C. ಅವರಿಗೆ ಸ್ಲೋ ಪಾಯಿಸನ್ ನೀಡಲಾಗುತ್ತಿದೆ. D. ಮೇಲಿನ ಎಲ್ಲಾ ಉತ್ತರಗಳು ಸರಿ ಎಂದು ಪೋಸ್ಟ್ ಮಾಡಿ ಸಿಎಂ ನಿತೀಶ್ ಕುಮಾರ್ ಅವರ ಕಾಲೆಳೆದಿದ್ದಾರೆ.
ಇತ್ತೀಚಿನ ಬಿಹಾರದ ಚಳಿಗಾಲದ ಅಧಿವೇಶನದಲ್ಲಿ, ಜಾತಿ ಜನಗಣತಿ ವರದಿ ಮತ್ತು ಮೀಸಲಾತಿ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ ನಿತೀಶ್ ಕುಮಾರ್ ಅವರು ಕೋಪಗೊಂಡು, ಜಿತನ್ ರಾಮ್ ಮಾಂಝಿ ವಿರುದ್ಧ ವಾಗ್ದಾಳಿ ನಡೆಸಿದ್ದರು.