ನವದೆಹಲಿ: ನೈಋತ್ಯ ದೆಹಲಿಯಲ್ಲಿ ಮಹಿಳೆಯೊಬ್ಬಳು ದಿನಗಟ್ಟಲೆ ಕಡೆಗಣಿಸಿದ್ದರಿಂದ ಕೋಪಗೊಂಡ 27 ವರ್ಷದ ಪ್ರೇಮಿಯೊಬ್ಬ ತನ್ನ ಸಂಗಾತಿಗೆ ಹಲವು ಬಾರಿ ಇರಿದಿದ್ದಾನೆ. ಇದರಿಂದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಏನಿದು ಘಟನೆ- ಪೊಲೀಸರು ಹೇಳಿದ್ದೇನು?:"ಗುರುವಾರ 6.20 ಕ್ಕೆ ಘಟನೆಯ ಬಗ್ಗೆ ಲಾಡೋ ಸರೈ ಫಿರ್ನಿ ರಸ್ತೆಯಿಂದ ಪಿಸಿಆರ್ ಕರೆ ಬಂದಿತ್ತು. ಈ ಕರೆ ಸ್ವೀಕರಿಸಿದಾಗ ಇಂತಹದೊಂದು ಘಟನೆ ನಡೆದಿರುವುದರ ಬಗ್ಗೆ ಮಾಹಿತಿ ಗೊತ್ತಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ, 23 ವರ್ಷದ ಮಹಿಳೆಯನ್ನು ಸಾಕೇತ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗಾಜಿಯಾಬಾದ್ ನಿವಾಸಿ ಗೌರವ್ ಪಾಲ್ ಎಂಬಾತ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಕ್ಯಾಬ್‌ನಲ್ಲಿ ಈ ಘಟನೆ ನಡೆದಿದ್ದರಿಂದ ಕೃತ್ಯ ನೋಡಿ ಕ್ಯಾಬ್ ಡ್ರೈವರ್ , ಅಲ್ಲಿನ ಸ್ಥಳೀಯರ ನೆರವು ಪಡೆದು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಬಗ್ಗೆ ಸಂತ್ರಸ್ತೆಯ ತಾಯಿ ಹೇಳುವುದಿಷ್ಟು:ಈ ಕೃತ್ಯದ ವಿಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ವಿಡಿಯೋದಲ್ಲಿ ಮಹಿಳೆ ಮೇಲೆ ವ್ಯಕ್ತಿ ಚೂರಿ ಇರಿದಿದ್ದು, ಮಹಿಳೆ ದೇಹದ ಮೇಲ್ಬಾಗದಲ್ಲಿ ರಕ್ತಸಿಕ್ತವಾಗಿರುವುದು ಕಂಡು ಬರುತ್ತದೆ. ಇನ್ನು ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆ ತಾಯಿ, ಮಗಳ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.