ರಾಂಚಿ (ಜಾರ್ಖಂಡ್): ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಶಾಸಕ ಸ್ಥಾನದ ಮೇಲೆ ಅನರ್ಹತೆ ತೂಗುಗತ್ತಿ ಹಾಗೂ ಶಾಸಕರ ಕುದುರೆ ವ್ಯಾಪಾರದ ಭೀತಿಯಿಂದ ಕುತೂಹಲಕಾರಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಇಂದು ಏಕಾಏಕಿ ಸ್ವತಃ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದಲ್ಲೇ ಶಾಸಕರು ರಾಜಧಾನಿ ರಾಂಚಿಯಿಂದ ಕುಂತಿ ಜಿಲ್ಲೆಗೆ ತಮ್ಮ ಮೊಕ್ಕಾಂ ಬದಲಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷಗಳ ಮೈತ್ರಿಕೂಟದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎಂಎಂನ 30 ಶಾಸಕರು, ಕಾಂಗ್ರೆಸ್ನ 18 ಮತ್ತು ಆರ್ಜೆಡಿಯ ಒಬ್ಬ ಶಾಸಕರು ಹಾಗೂ ಪ್ರತಿಪಕ್ಷ ಬಿಜೆಪಿಯ 26 ಶಾಸಕರಿದ್ದಾರೆ. ಇದೀಗ ಆಡಳಿತಾರೂಢ ಪಕ್ಷಗಳ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಲು ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮೊದಲಿಗೆ ಮೂರು ಪಕ್ಷಗಳ ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೇನ್ ನಿವಾಸದಲ್ಲಿ ಸಭೆ ಸೇರಿದ್ದರು. ನಂತರ ಸಿಎಂ ನಿವಾಸದಿಂದ ಮೂರು ಬಸ್‌ಗಳಲ್ಲಿ ಶಾಸಕರು ಹೊರಬಂದರು. ಮೊದಲ ಬಸ್‌ನಲ್ಲಿ ಸ್ವತಃ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅಲ್ಲದೇ, ನಿರಾಳರಾಗಿರುವಂತೆ ಕಂಡು ಬಂದ ಸಿಎಂ ಹೇಮಂತ್ ಸೊರೇನ್ ಯಾವುದೇ ಟೆನ್ಷನ್ ಇಲ್ಲದೆ ಶಾಸಕರೊಂದಿಗೆ ಸೆಲ್ಫಿ ಸಹ ತೆಗೆದುಕೊಂಡಿದ್ದಾರೆ.
ಡ್ಯಾಂ ಪ್ರದೇಶದಲ್ಲಿ ಶಾಸಕರ ಮೊಕ್ಕಾಂ: ರಾಂಚಿಯಿಂದ ಸಿಎಂ ಹೇಮಂತ್ ಸೊರೇನ್ ನೇತೃತ್ವದಲ್ಲಿ ಕುಂತಿ ಜಿಲ್ಲೆಗೆ ಬಂದಿರುವ ಶಾಸಕರು, ಇಲ್ಲಿನ ಲಟ್ರಟು ಡ್ಯಾಂ ಪ್ರದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಜಧಾನಿ ರಾಂಚಿಯಿಂದ ಕೇವಲ 30 ಕಿಮೀ ದೂರದಲ್ಲಿ ಈ ಡ್ಯಾಂ ಇದ್ದು, ಎಲ್ಲ ಶಾಸಕರು ಇಲ್ಲಿಯ ಅತಿಥಿಗೃಹದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಇಡೀ ಪ್ರದೇಶದಲ್ಲಿ ಭಾರಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.
ನಮ್ಮ ಎಲ್ಲ ಸಚಿವರು ಮತ್ತು ಶಾಸಕರು ಒಟ್ಟಿಗೆ ಇದ್ದಾರೆ. ನಾವು ಬೇರೆ ಸ್ಥಳಗಳಿಗೂ ಹೋಗುತ್ತೇವೆ. ಮುಂದೆ ನಾವು ಎಲ್ಲಿಗೆ ಹೋಗುತ್ತೇವೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಹಲವಾರು ವಿಷಯಗಳು ಹರಿದಾಡುತ್ತಿವೆ ಎಂದು ಸಚಿವ ಸತ್ಯಾನಂದ ಭೋಕ್ತಾ ತಿಳಿಸಿದ್ದಾರೆ.