ರಾಂಚಿ (ಜಾರ್ಖಂಡ್): ಮುಖ್ಯಮಂತ್ರಿ ಹೇಮಂತ್ ಸೋರನ್ ಅವರ ಮೇಲೆ ಗಣಿಗಾರಿಕೆ ಗುತ್ತಿಗೆ ನೀಡುವಿಕೆಯಲ್ಲಿನ ಅವ್ಯವಹಾರ ಹಾಗೂ ಅವರ ಕುಟುಂಬದವರು ನಡೆಸುತ್ತಿರುವ ಕೆಲವು ಶೆಲ್ ಕಂಪನಿಗಳ ವಹಿವಾಟಿನ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಜಾರ್ಖಂಡ್ ಹೈಕೋರ್ಟ್ ಸ್ವೀಕರಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮುಖ್ಯ ನ್ಯಾಯಮೂರ್ತಿ ರವಿರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು ಜೂನ್ 1 ರಂದು ವಿಚಾರಣೆ ಮುಕ್ತಾಯಗೊಳಿಸಿ, ಜೂನ್ 10 ಅನ್ನು ಮುಂದಿನ ವಿಚಾರಣೆ ದಿನಾಂಕವಾಗಿ ನಿಗದಿಪಡಿಸಿದೆ.
ಶಿವಶಂಕರ್ ಶರ್ಮಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಯಾವುದೇ ವೈಪರೀತ್ಯವಿಲ್ಲ ಹಾಗೆ ಹೈಕೋರ್ಟ್ ವಿಚಾರಣೆಗೆ ಒಳಪಡಿಸಬಾರದು ಎಂಬುದಕ್ಕೂ ಯಾವುದೇ ಅಡ್ಡಿಯಿಲ್ಲ ಎಂದು ಪೀಠವು ಹೇಳಿದೆ.
ಪ್ರಕರಣದ ಅರ್ಹತೆಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ ಮತ್ತು ಜೂನ್ 10 ರಂದು ಭೌತಿಕ ಕ್ರಮದಲ್ಲಿ ಮತ್ತೊಮ್ಮೆ ಸುದೀರ್ಘ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ. ಅಡ್ವೊಕೇಟ್ ಜನರಲ್ ರಾಜೀವ್ ರಂಜನ್ ಅವರು ನ್ಯಾಯಾಲಯ ನೀಡಿದ ಆದೇಶವನ್ನು ವಿಶ್ಲೇಷಿಸಲು ಸ್ವಲ್ಪ ಸಮಯ ಬೇಕು ಎಂದು ಮನವಿ ಮಾಡಿದ್ದಾರೆ ಮತ್ತು ರಾಜ್ಯ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬ್ಬಲ್ ಮುಂದಿನ ದಿನಾಂಕದಂದು ವಾದಕ್ಕೆ ಹಾಜರಾಗಲು ಆಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಕೇಳಿಕೆಗೆ ಸಿಡಿಮಿಡಿಕೊಂಡ ಹೈಕೋರ್ಟ್ ದಿನಾಂಕವನ್ನು ಬದಲಾಯಿಸುವುದಿಲ್ಲ, ಬದಲಿಗೆ ನ್ಯಾಯಾಲಯಕ್ಕೆ ಹಾಜರಾಗಲಲು ವಕೀಲರು ತಮ್ಮ ವೇಳಾಪಟ್ಟಿಯನ್ನೇ ಬದಲಾಯಿಸಬೇಕಾಗುತ್ತದೆ ಎಂದು ಚಾಟಿ ಬೀಸಿತು.
ಇನ್ನು ಶರ್ಮಾ ಅವರು ಎರಡು ಪ್ರತ್ಯೇಕ ಪಿಐಎಲ್‌ಗಳನ್ನು ಸಲ್ಲಿಸಿದ್ದರು. ಮೊದಲನೆಯದು ರಾಂಚಿಯ ಅಂಗರ್ಹಾ ಬ್ಲಾಕ್‌ನಲ್ಲಿ 88 ದಶಮಾಂಶಗಳಷ್ಟು ಭೂಮಿಯಲ್ಲಿ ಕಲ್ಲುಗಳನ್ನು ಗಣಿಗಾರಿಕೆ ಮಾಡಲು ಅವರ ಹೆಸರಿನಲ್ಲಿ ಪರವಾನಗಿ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದೆ. ಎರಡನೇ ಪಿಐಎಲ್ ಸೋರನ್ ಮತ್ತು ಅವರ ಪರಿಚಯಸ್ಥರಿಂದ ಶೆಲ್ ಕಂಪನಿಗಳನ್ನು ಅಕ್ರಮ ಹಣಕ್ಕಾಗಿ ಸ್ಥಾಪಿಸಲಾಗಿದೆ ಎಂದು ದೂರಲಾಗಿದೆ. ಸೋರನ್ ಸ್ವತಃ ಗಣಿ ಸಚಿವರಾಗಿದ್ದಾಗ ಗಣಿಗಾರಿಕೆ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರು ಸಹ ಭಾಗಿಯಾಗಿದ್ದಾರೆ ಎಂದು ಪಿಐಎಲ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ: ಹೊತ್ತಿ ಉರಿದ ಬಸ್,7 ಜನ ಸಜೀವ ದಹನ; ಮೋದಿ ಸಂತಾಪ