ರಾಂಚಿ:ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಅವರ ಆರೋಗ್ಯ ಸಮಸ್ಯೆ ಹಿನ್ನೆಲೆ ರಾಂಚಿಯಿಂದ ಚೆನ್ನೈಗೆ ವಿಮಾನದ ಮೂಲಕ ಕರೆತರಲಾಗಿತ್ತು. ಚಿಕಿತ್ಸೆ ವೇಳೆಯೇ ಶಿಕ್ಷಣ ಸಚಿವರು ಕೊನೆಯುಸಿರೆಳೆದಿದ್ದಾರೆ. ಸಚಿವರ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಬೆಳಗ್ಗೆ 9ಕ್ಕೆ ಜಗರ್ನಾಥ್ ಮಹತೋ ಕೊನೆಯುಸಿರೆಳೆದಿರುವ ಬಗ್ಗೆ ಚೆನ್ನೈನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ವೇಳೆ ಹದಗೆಟ್ಟ ಆರೋಗ್ಯ: ಜಗರ್ನಾಥ್ ಮಹತೋ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾರ್ಚ್ 14ರಂದು ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ಇದ್ದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಅವರನ್ನು ರಾಂಚಿಯ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಎಂ ಹೇಮಂತ್ ಸೊರೇನ್ ಆಸ್ಪತ್ರೆಗೆ ತೆರಳಿ ಸಚಿವರ ಆರೋಗ್ಯವನ್ನು ವಿಚಾರಿಸಿದರು. ಅವರ ಸ್ಥಿತಿ ಗಂಭೀರವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸುವಂತೆ ಸಿಎಂ ಸೂಚಿಸಿದ್ದರು. ಸಿಎಂ ಸೋರೆನ್ ಅವರ ಸಲಹೆ ಮೇರೆಗೆ ಅವರನ್ನು ತಕ್ಷಣವೇ ಚೆನ್ನೈಗೆ ವಿಮಾನದಲ್ಲಿ ರವಾನಿಸಲಾಗಿತ್ತು. ಅವರು ಚೆನ್ನೈನ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಶಿಕ್ಷಣ ಸಚಿವರ ನಿಧನದ ಸುದ್ದಿಯಿಂದ ಜಾರ್ಖಂಡ್‌ನ ರಾಜಕೀಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಎಲ್ಲರೂ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಓದಿ: ನಿಪ್ಪಾಣಿ ಚೆಕ್ಪೋಸ್ಟ್ನಲ್ಲಿ 1.5ಕೋಟಿ ರೂ. ಹಣ ಜಪ್ತಿ ಮಾಡಿದ ಪೊಲೀಸರು